ಕಲಬುರಗಿ: ಕಳೆದ ಏಳೆಂಟು ತಿಂಗಳಿಂದ ಜಿಲ್ಲೆಗೆ ಆಗಮಿಸದ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಅವರನ್ನು ಉಸ್ತುವಾರಿ ಸ್ಥಾನದಿಂದ ಕೆಳಗಿಳಿಸಿ, ಸ್ಥಳೀಯ ಶಾಸಕರಿಗೆ ಉಸ್ತುವಾರಿ ನೀಡುವಂತೆ ಸ್ಥಳೀಯ ಸಂಘಟನೆ ಮುಖಂಡರು ಆಗ್ರಹಿಸಿದ್ದಾರೆ.
ಡಿಸಿಎಂ ಹಾಗೂ ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ವಿರುದ್ಧ ಜಿಲ್ಲೆಯಲ್ಲಿ ಮತ್ತೆ ಆಕ್ರೋಶ ಭುಗಿಲೆದ್ದಿದ್ದು, ಅವರನ್ನು ಉಸ್ತುವಾರಿ ಸ್ಥಾನದಿಂದ ವಜಾಗೊಳಿಸುವಂತೆ ಕೆಲ ಸಂಘಟನೆಯ ಮುಖಂಡರು ಒತ್ತಾಯಿಸಿದ್ದಾರೆ.
ಜಿಲ್ಲೆಯಲ್ಲಿ ಈ ಬಾರಿ ಭೀಕರ ಪ್ರವಾಹ ಎದುರಾಗಿ ಜನ ತತ್ತರಿಸಿ ಹೋದರೂ ಸಹ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ವಹಿಸಿಕೊಂಡಿರುವ ಸಚಿವರು ಈ ಕಡೆ ಮುಖ ಹಾಕಿಯೂ ನೋಡಿಲ್ಲ. ಅದರಿಂದ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನದಿಂದ ಕೆಳಗಿಳಿಸಿ ಕಲಬುರಗಿಯ ಏಳು ಜನ ಬಿಜೆಪಿ ಶಾಸಕರ ಪೈಕಿ ಅರ್ಹ ಶಾಸಕರಿಗೆ ಜಿಲ್ಲೆಯ ಉಸ್ತುವಾರಿ ವಹಿಸುವಂತೆ ಸಿಎಂ ಯಡಿಯೂರಪ್ಪನವರಿಗೆ ಮನವಿ ಮಾಡಿದ್ದಾರೆ.
ವಿಭಾಗೀಯ ಕಚೇರಿಗಳ ಸ್ಥಳಾಂತರಕ್ಕೆ ಆಕ್ರೋಶ:
ಹೈದರಾಬಾದ್ ಕರ್ನಾಟಕದ ಕೇಂದ್ರಸ್ಥಾನವಾಗಿರುವ ಕಲಬುರಗಿ ಜಿಲ್ಲೆಯಲ್ಲಿರುವ ವಿವಿಧ ವಿಭಾಗೀಯ ಕಚೇರಿಗಳನ್ನು ಬೇರೆಡೆ ಸ್ಥಳಾಂತರಿಸುವ ಮೂಲಕ ರಾಜ್ಯ ಸರ್ಕಾರ ಮತ್ತೆ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಹೋರಾಟಗಾರರು ಅಸಮಾಧಾನ ಹೊರಹಾಕಿದ್ದಾರೆ.
ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಪ್ರಾದೇಶಿಕ ಕಚೇರಿ ಹಾಗೂ ಆಹಾರ ಪ್ರಯೋಗಾಲಯದ ವಿಭಾಗೀಯ ಕಚೇರಿಗಳನ್ನು ಬೇರೆ ಜಿಲ್ಲೆಗಳಿಗೆ ಸ್ಥಳಾಂತರಿಸುವ ಹುನ್ನಾರ ನಡೆದಿದೆ. ಒಂದು ವೇಳೆ ಸ್ಥಳೀಯ ಶಾಸಕರಿಗೆ ಜಿಲ್ಲೆಯ ಉಸ್ತುವಾರಿ ವಹಿಸಿದ್ದರೆ ಈ ಭಾಗದ ಅಭಿವೃದ್ಧಿಗೆ ಹೆಚ್ಚು ಒತ್ತು ಕೊಡುತ್ತಿದ್ದರು. ಈ ರೀತಿಯ ಅನ್ಯಾಯವಾಗದಂತೆ ಸದನದಲ್ಲಿ ಧ್ವನಿ ಎತ್ತುತ್ತಿದ್ದರು. ಹೀಗಾಗಿ ಕಲಬುರಗಿ ಜಿಲ್ಲಾ ಉಸ್ತುವಾರಿಯನ್ನು ಸ್ಥಳೀಯ ಶಾಸಕರಿಗೆ ವಹಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.