ಕಲಬುರಗಿ: ಕೊರೊನಾ ಸೋಂಕಿನಿಂದ ನಗರದಲ್ಲಿ ಮತ್ತಿಬ್ಬರು ವೃದ್ಧರು ಮೃತಪಟ್ಟಿದ್ದಾರೆ. ಇದರಿಂದ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 36ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದರು.
ತೀವ್ರ ಉಸಿರಾಟದ ತೊಂದರೆ, ಜ್ವರ, ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ನಗರದ ಸವೇರಾ ಕಾಲೋನಿಯ 84 ವರ್ಷದ ವೃದ್ಧ (P-26644) ಜು. 4ರಂದು ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಾಗಿದ್ದರು. ಜು. 7ರಂದು ಕೊರೊನಾ ಸೋಂಕು ತಗುಲಿರುವುದು ಖಾತ್ರಿಯಾಗಿ ಜು. 10ರಂದು ಮೃತಪಟ್ಟಿದ್ದಾರೆ. ತೀವ್ರ ಉಸಿರಾಟದ ತೊಂದರೆ, ಅಧಿಕ ರಕ್ತದೊತ್ತಡ ಕಾಯಿಲೆಯಿಂದ ಬಳಲುತ್ತಿದ್ದ ನಗರದ ಎಂ.ಎಸ್.ಕೆ.ಮಿಲ್ ಪ್ರದೇಶದ 80 ವರ್ಷದ ವೃದ್ಧ (P-26648) ಜು. 4ರಂದು ಆಸ್ಪತ್ರೆಗೆ ದಾಖಲಾಗಿದ್ದರು. ಜು. 7ರಂದು ಕೊರೊನಾ ತಗುಲಿದ್ದು ದೃಢವಾಗಿದ್ದು, ಜು. 10ರಂದು ನಿಧನ ಹೊಂದಿದ್ದಾರೆ.
ಜಿಲ್ಲೆಯಲ್ಲಿ ನಿನ್ನೆ 65 ಜನರಿಗೆ ಸೋಂಕು ದೃಢಪಟ್ಟಿದೆ. ಈ ಪೈಕಿ 8 ಮಕ್ಕಳು, 21 ಮಹಿಳೆಯರು ಎಲ್ಐಎಲ್ ಲಕ್ಷಣವುಳ್ಳ 27 ಪ್ರಕರಣಗಳು ದಾಖಲಾಗಿವೆ. ಸದ್ಯ ಜಿಲ್ಲೆಯಲ್ಲಿ 528 ಸಕ್ರಿಯ ಪ್ರಕರಣಗಳಿವೆ.