ಕಲಬುರಗಿ: ನ್ಯಾಯವಾದಿ ಈರಣ್ಣಗೌಡ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ನೀಲಕಂಠರಾವ್ ಪಾಟೀಲ್ ಹಾಗೂ ಇವರ ಪತ್ನಿ ಸಿದ್ದಮ್ಮ ಪಾಟೀಲ್ ಬಂಧಿತ ಆರೋಪಿಗಳು ಎಂದು ಪೊಲೀಸರು ತಿಳಿಸಿದ್ದಾರೆ. ಡಿಸೆಂಬರ್ 7 ರಂದು ಕಲಬುರಗಿ ನಗರದ ಗಂಗಾವಿಹಾರ ಅಪಾರ್ಟ್ಮೆಂಟ್ನಲ್ಲಿ ನ್ಯಾಯವಾದಿ ಈರಣ್ಣಗೌಡ ಪಾಟೀಲ್ ಅವರನ್ನು ಬರ್ಬರವಾಗಿ ಕೊಚ್ಚಿ ಕೊಲೆ ಮಾಡಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ವಿಶ್ವವಿದ್ಯಾಲಯ ಠಾಣೆ ಪೊಲೀಸರು ಇದೀಗ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಹತ್ಯೆಯ ನಾಲ್ಕೈದು ದಿನದ ಹಿಂದೆ ಕೊಲೆಗೆ ಪ್ಲಾನ್ ಮಾಡಿ ಎಲ್ಲಾ ವ್ಯವಸ್ಥೆ ಮಾಡಿದ್ರು ಎಂಬ ಆರೋಪ ಗಂಡ-ಹೆಂಡತಿ ಮೇಲಿದೆ. ಅಲ್ಲದೆ ಈರಣ್ಣಗೌಡ ಹತ್ಯೆಯಾದ ಬಳಿಕ ಆರೋಪಿ ಮಲ್ಲಿನಾಥ್ ನಾಯ್ಕೋಡಿಗೆ, ಸಿದ್ದಮ್ಮ 50 ಸಾವಿರ ಹಣ ಕೊಟ್ಟಿದ್ರು. ಕೊಲೆಯ ನಂತರ ಆರೋಪಿ ಮಲ್ಲಿನಾಥ್ ನಾಯ್ಕೋಡಿ ರಕ್ತದ ಕಲೆಯಲ್ಲಿಯೇ ಸಿದ್ದಮ್ಮ ಮನೆಗೆ ಬಂದು ಹಣ ತೆಗೆದುಕೊಂಡು ಹೋಗಿದ್ದನೆಂದು ತನಿಖೆಯಲ್ಲಿ ಬಯಲಾಗಿದೆ.
ಬಂಧಿತ ನೀಲಕಂಠ ಪಾಟೀಲ್ ಹಾಗೂ ಕೊಲೆಯಾದ ನ್ಯಾಯವಾದಿ ಈರಣ್ಣಗೌಡ ಪಾಟೀಲ್ ಸಹೋದರ ಸಂಬಂಧಿಯಾಗಿದ್ದಾರೆ. ಕಲಬುರಗಿ ನಗರಕ್ಕೆ ಹೊಂದಿಕೊಂಡಂತೆ ಎಕರೆಗೆ 3ಕೋಟಿ ರೂ. ಬೆಲೆ ಬಾಳುವ 12 ಎಕರೆ ಜಮೀನು ಈರಣ್ಣಗೌಡ ಪಾಟೀಲ್ ಅವರ ಹೆಸರಿನಲ್ಲಿ ಇತ್ತು. ಈ ಜಮೀನನ್ನು ಆರೋಪಿ ಮಲ್ಲಿನಾಥ ನಾಯ್ಕೋಡಿ ಕುಟುಂಬದವರು ನೋಡಿಕೊಳ್ಳುತ್ತಿದ್ದರು. ಈ ನಡುವೆ ಸೈಟ್ ಹಾಕಿ ಮಾರಾಟ ಮಾಡಿದ್ರೆ ಒಂದೊಂದು 30x40 ಸೈಜ್ ಸೈಟ್‌ಗೆ ಕನಿಷ್ಠ ಅಂದ್ರೂ 20 ರಿಂದ 30 ಲಕ್ಷ ರೂ. ಬೆಲೆ ಬಾಳುತ್ತದೆ. ಹೀಗಾಗಿ ತಮ್ಮ ಜಮೀನಿಗೆ ನಾನ್ ಅಗ್ರಿಕಲ್ಚರ್ (ಎನ್ಎ), ಜಿಡಿಎ ಮಾಡಿಸಿ ಸೈಟ್ ಆಗಿ ಪರಿವರ್ತನೆ ಮಾಡಲು ಈರಣ್ಣಗೌಡ ಪಾಟೀಲ್ ಯೋಜಿಸಿದ್ದರು. ಆದ್ರೆ ಜಮೀನಿನಲ್ಲಿ ಪಾಲು ಬೇಕು ಎಂದು ನೀಲಕಂಠ ಪಾಟೀಲ್ ಹಾಗೂ ನಾಯ್ಕೋಡಿ ಕುಟುಂಬದವರು ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.
ಕೋಟಿ ಕೋಟಿ ಮೌಲ್ಯದ ಆಸ್ತಿ ಆಗಿರೋದ್ರಿಂದ ಈ ಮುಂಚೆ ಕೂಡಾ ಇದೆ ವಿಚಾರವಾಗಿ ಗಲಾಟೆ, ರಾಜಿ-ಪಂಚಾಯಿತಿಗಳು ನಡೆದಿದ್ದವು. 12 ಎಕೆರೆಯಲ್ಲಿ 2 ರಿಂದ 3 ಎಕರೆನಾದರೂ ನೀಡುವಂತೆ ಆರೋಪಿಗಳು ದುಂಬಾಲು ಬಿದ್ದಿದ್ದರು. ಆದರೆ ಇದಕ್ಕೆ ಈರಣ್ಣಗೌಡ ಪಾಟೀಲ್ ಸುತಾರಾಂ ಒಪ್ಪಿರಲಿಲ್ಲ. ಈರಣ್ಣಗೌಡ ಒಬ್ಬನೇ ಮಗ, ಹೀಗಾಗಿ ಅವನನ್ನು ಮುಗಿಸಿದರೆ ಕೋಟಿ ಕೋಟಿ ಬೆಲೆಬಾಳುವ ಜಮೀನು ತಮ್ಮದಾಗುತ್ತೆಂದು ಹಂತಕರು ಕೊಲೆಗೆ ಯೋಜನೆ ರೂಪಿಸಿದ್ದರು ಎಂದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಡಿಸೆಂಬರ್ 7 ರಂದು ಜಮೀನು ವ್ಯಾಜ್ಯ ಸಂಬಂಧ ಅಂತಿಮ ತೀರ್ಪು ಇತ್ತು. ಆ ದಿನ ಈರಣ್ಣಗೌಡ ಪಾಟೀಲ್ ಕೋರ್ಟ್ಗೆ ಹೋಗುತ್ತಿದ್ದರು. ಇತ್ತ ನೀಲಕಂಠ ಪಾಟೀಲ್ ಮತ್ತು ಅವರ ಪತ್ನಿ ಸಿದ್ದಮ್ಮ ಪಾಟೀಲ್ ತಮ್ಮ ಹೊಸ ಕಾರ್ ಪೂಜೆಗೆಂದು ಗಾಣಗಾಪುರಕ್ಕೆ ತೆರಳಿದ್ದರು. ಪ್ರೀ ಪ್ಲಾನ್ನಂತೆ ಮಲ್ಲಿನಾಥ, ಅವಣ್ಣ, ಭಾಗೇಶ ನಾಯ್ಕೋಡಿ ದಾರಿಯಲ್ಲಿ ಈರಣ್ಣಗೌಡ ಪಾಟೀಲ್ ಅವರನ್ನು ಅಡ್ಡಹಾಕಿ, ಕೈಯಲ್ಲಿ ಮಚ್ಚು ಹಿಡಿದುಕೊಂಡು ಅಟ್ಟಾಡಿಸಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದರು.
ಘಟನೆ ಸಂಭವಿಸಿದ 24 ಗಂಟೆಯಲ್ಲೇ ಮೂವರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ನಿನ್ನೆ ದಿನ ಮತ್ತಿಬ್ಬರು ಆರೋಪಿಗಳನ್ನು ಬಂಧನ ಮಾಡಲಾಗಿದೆ. ಸದ್ಯ ಎಲ್ಲಾ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಪಡೆಯಲಾಗಿದೆ. ಬಂಧಿತರನ್ನು ಸಂಪೂರ್ಣವಾಗಿ ವಿಚಾರಣೆ ಮಾಡಿದ ಬಳಿಕ ನ್ಯಾಯಾಲಯಕ್ಕೆ ಅಂತಿಮ ವರದಿ ನೀಡಲಾಗುತ್ತದೆ ಎಂದು ನಗರ ಪೊಲೀಸ್ ಆಯುಕ್ತ ಚೇತನ್ ಆರ್ ತಿಳಿಸಿದ್ದಾರೆ.
ಇದನ್ನೂ ಓದಿ: ಕಲಬುರಗಿ: ಹಾಡಹಗಲೇ ಲಾಯರ್ ಬರ್ಬರ ಕೊಲೆ, ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ವಕೀಲರಿಂದ ಪ್ರತಿಭಟನೆ