ಕಲಬುರಗಿ : ಚಿಂಚೋಳಿಯ ಚಂದಾಪೂರನಲ್ಲಿರುವ ಎಂಆರ್ಎಫ್ ಟೈರ್ ಶೋರೂಂ ಮತ್ತೆ ಕಳ್ಳತನವಾಗಿದೆ. ಈ ಬಾರಿಯೂ ಲಾರಿ ಟೈರ್‌ಗಳನ್ನೇ ಗುರಿಯಾಗಿಸಿಕೊಂಡು ಕಳ್ಳರು ಅಂದಾಜು 20 ಲಕ್ಷ ಮೌಲ್ಯದ ಸುಮಾರು 53 ಲಾರಿ ಟೈರ್ ಗಳನ್ನು ಕದ್ದು ಪರಾರಿಯಾಗಿದ್ದಾರೆ. ಕಳ್ಳರ ಕೈಚಳಕ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಚಂದಾಪೂರನಲ್ಲಿ ನಿರ್ಮಾಣಗೊಳ್ಳುತ್ತಿರುವ ನೂತನ ವಿಧಾನಸೌಧದ ಹತ್ತಿರ ಎಂಆರ್ಎಫ್ ಟೈರ್ ಶೋರೂಂ ಇದ್ದು, ಶನಿವಾರ ಮಧ್ಯರಾತ್ರಿ ಶೋರೂಂಗೆ ನುಗ್ಗಿದ್ದ ಕಳ್ಳರು ಗಾರ್ಡ್ ಮೇಲೆ ಹಲ್ಲೆಮಾಡಿ ಕೋಣೆಯೊಂದರಲ್ಲಿ ಕೂಡಿ ಹಾಕಿದ್ದಾರೆ. ನಂತರ ಸಿಸಿಟಿವಿಗಳನ್ನು ಪುಡಿ ಮಾಡಿ ಅಂಗಡಿಯ ಶೆಟರ್ಸ್ ಮುರಿದು ಒಳನುಗ್ಗಿ ಟೈರ್‌ಗಳನ್ನು ಕದ್ದು ಪರಾರಿಯಾಗಿದ್ದಾರೆ. ಸ್ಥಳಕ್ಕೆ ಪೊಲೀಸರು, ಶ್ವಾನದಳ ಹಾಗೂ ಬೆರಳಚ್ಚು ತಜ್ಞರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಿಸಿಟಿವಿ ದೃಶ್ಯದ ಆಧಾರದ ಮೇಲೆ ಕಳ್ಳರ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಆರು ತಿಂಗಳಲ್ಲಿ 3 ಬಾರಿ ಕಳ್ಳತನ, ಲಾರಿ ಟೈರ್ ಮಾತ್ರ ಕಳವು: ಕಳೆದ 6 ತಿಂಗಳಲ್ಲಿ ಈ ಎಂಆರ್ಎಫ್ ಶೋರೂಮ್ ನಿಂದ 3 ಬಾರಿ ಕಳ್ಳತನವಾಗಿದೆ. ಬೇರೆ ವಾಹನಗಳ ಟೈರ್‌ಗಳು ಇದ್ದರೂ ಪ್ರತಿಬಾರಿ ಲಾರಿ ಟೈರ್‌ಗಳನ್ನು ಮಾತ್ರ ಕಳ್ಳತನ ಮಾಡಲಾಗಿದೆ. ಈಗಾಗಲೇ ಸುಮಾರು 25 ಲಕ್ಷದವರೆಗೆ ನಷ್ಟವಾಗಿದ್ದು, ಪ್ರಕರಣ ದಾಖಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ ಎಂದು ಶೋರೂಮ್ ಮಾಲೀಕ ಸಚ್ಚಿದಾನಂದ ಸುಕಂದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ವರ್ತಕರಿಂದ ಪ್ರತಿಭಟನೆ : ಕಳ್ಳತನ ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ವ್ಯಾಪಾರಸ್ಥರು ಪ್ರತಿಭಟನೆ ನಡೆಸಿದ್ದಾರೆ. ಪಟ್ಟಣದ ಕೇತಕಿ ಆಸ್ಪತ್ರೆಯಿಂದ ಪೊಲೀಸ್ ಠಾಣೆಯವರೆಗೆ ಪ್ರತಿಭಟನಾ ಮೆರವಣಿಗೆ ಮಾಡಿ ಕಳ್ಳರನ್ನು ಬಂಧಿಸುವಂತೆ ಒತ್ತಾಯಿಸಿದ್ದಾರೆ.
ಓದಿ : ಗಂಗಾವತಿಯಲ್ಲಿ ಎರಡು ಪ್ರತ್ಯೇಕ ಪ್ರಕರಣದಲ್ಲಿ 6 ಜನರ ಬಂಧನ.. ವಾಹನ-ಚಿನ್ನಾಭರಣ ವಶ