ಸೇಡಂ(ಕಲಬುರಗಿ): ಲಾಕ್ಡೌನ್ನಿಂದಾಗಿ ಅತ್ತ ಕೂಲಿ ಕೆಲಸವಿಲ್ಲದೆ, ಇತ್ತ ಹೊಟ್ಟೆಗೆ ಹಿಟ್ಟಿಲ್ಲದೆ ಸಂಕಷ್ಟಕ್ಕೀಡಾಗಿದ್ದ ಬಡವರಿಗೆ ರೆಡ್ಡಿ ಸಮಾಜ ನೆರವಿನ ಹಸ್ತ ಚಾಚಿದೆ. 5.60 ಲಕ್ಷ ಮೌಲ್ಯದ ಆಹಾರ ಪದಾರ್ಥಗಳ ಕಿಟ್ ವಿತರಿಸಿದೆ.
ಕಿಟ್ನಲ್ಲಿ 5 ಕೆಜಿ ಅಕ್ಕಿ, 1 ಕೆಜಿ ಬೇಳೆ ಹಾಗೂ 1 ಕೆಜಿ ಉಪ್ಪು ಇರಲಿದೆ. ಕಿಟ್ಗಳನ್ನು ತಹಶೀಲ್ದಾರ್ ಬಸವರಾಜ ಬೆಣ್ಣಿಶಿರೂರ ಅವರಿಗೆ ಹಸ್ತಾಂತರಿಸಲಾಗಿದೆ. ಕೂಲಿ ಕಾರ್ಮಿಕರು, ಬಡ ರೈತರು ಸೇರಿದಂತೆ ನಿರ್ಗತಿಕರು ಪ್ರತಿನಿತ್ಯ ಊಟಕ್ಕಾಗಿ ಪರದಾಡುತ್ತಿದ್ದು, ಆಹಾರ ಧಾನ್ಯಗಳಿಲ್ಲದೆ ತುತ್ತಿನ ಚೀಲ ತುಂಬಿಸಿಕೊಳ್ಳಲು ಹೆಣಗಾಡುತ್ತಿದ್ದಾರೆ. ಅದಕ್ಕಾಗಿ ರೆಡ್ಡಿ ಸಮಾಜದ ವತಿಯಿಂದ ರೇಷನ್ ಕಾರ್ಡ್ ಇಲ್ಲದ ಕುಟುಂಬಗಳಿಗೆ ಆಹಾರ ಸಾಮಗ್ರಿಗಳ ಕಿಟ್ ನೀಡಲಾಗಿದೆ ಎಂದು ರೆಡ್ಡಿ ಸಮಾಜ ಯುವ ಘಟಕ ಅಧ್ಯಕ್ಷ ಶಿವಲಿಂಗರೆಡ್ಡಿ ಬೆನಕನಹಳ್ಳಿ ತಿಳಿಸಿದ್ದಾರೆ.
ಈ ವೇಳೆ ಮಾಜಿ ಉಪ ಸಭಾಪತಿ ಚಂದ್ರಶೇಖರ ರೆಡ್ಡಿ, ಮಾಜಿ ಶಾಸಕ ನಾಗರೆಡ್ಡಿ ಪಾಟೀಲ, ಬಸವಂತ ರೆಡ್ಡಿ ಪಾಟೀಲ ಮೋತಕಪಲ್ಲಿ, ಸಂಘದ ತಾಲೂಕು ಅಧ್ಯಕ್ಷ ನಾಗಭೂಷಣ ರೆಡ್ಡಿ, ಜಿಲ್ಲಾ ಪಂಚಾಯಿತಿ ಆರೋಗ್ಯ ಮತ್ತು ಕುಟುಂಬ ಸ್ಥಾಯಿ ಸಮಿತಿ ಅಧ್ಯಕ್ಷ ದಾಮೋದರೆಡ್ಡಿ ಶಿಲಾರಕೋಟ, ಹಿರಿಯ ಸಾಹಿತಿ ಮಹಿಪಾಲರೆಡ್ಡಿ ಮುನ್ನೂರು, ಹೇಮವೇಮ ಟ್ರಸ್ಟ್ ಅಧ್ಯಕ್ಷ ಶರಣರೆಡ್ಡಿ ಪಾಟೀಲ ಜಿಲ್ಲೇಡಪಲ್ಲಿ ಇನ್ನಿತರರು ಉಪಸ್ಥಿತರಿದ್ದರು.