ಕಲಬುರಗಿ: ಬಡ ಕುಟುಂಬಗಳಿಗೆ ನೀಡಬೇಕಾದ ಪಡಿತರ ಧಾನ್ಯವನ್ನು ನೀಡದೆ ಸತಾಯಿಸುತ್ತಿರುವ ಘಟನೆ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ನಡೆದಿದೆ.
ಲಾಕ್ಡೌನ್ ಹಿನ್ನೆಲೆಯಲ್ಲಿ ಎರಡು ತಿಂಗಳ ಧಾನ್ಯ ಒಮ್ಮೆಗೆ ನೀಡಲು ಕೇಂದ್ರ ಸರ್ಕಾರ ಆದೇಶಿಸಿತ್ತು. ಅದರ ಅನ್ವಯ ಪಡಿತರ ಧಾನ್ಯವನ್ನು ಆಯಾ ನ್ಯಾಯಬೆಲೆ ಅಂಗಡಿಗಳಿಗೆ ಪೂರೈಸಿತ್ತು. ಅದರಂತೆ ವಾಡಿ ಪಟ್ಟಣದಲ್ಲಿ ಥಂಬ್ ತೆಗೆದುಕೊಳ್ಳಲಾಗಿದೆ. ಆದ್ರೆ ಇದುವರೆಗೂ ಪಡಿತರ ಧಾನ್ಯ ನೀಡಿಲ್ಲ. ಇದರಿಂದಾಗಿ ನಿರ್ಬಂಧಕ್ಕೊಳಪಟ್ಟ (ಸೀಲ್ಡೌನ್) ಬಡಾವಣೆಗಳ ಜನ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ಎರಡು ವರ್ಷದ ಮಗುವಿನಲ್ಲಿ ಕೊರೊನಾ ಸೋಂಕಿನ ಕಾರಣಕ್ಕೆ ವಾಡಿಯ ಪಿಲಕಮ್ ಮತ್ತು ಕಲಕಮ್ ಸೇರಿಂದತೆ ನಾಲ್ಕು ಏರಿಯಾಗಳಿಗೆ ನಿರ್ಬಂಧ ವಿಧಿಸಲಾಗಿದೆ. ಸೀಲ್ಡೌನ್ ಮಾದರಿಯ ಭದ್ರತೆ ಕೈಗೊಂಡಿದ್ದು, ಇಲ್ಲಿನ ಜನ ಹೊರಗೆ ಬರಲು ನಿರ್ಬಂಧ ಹಾಕಲಾಗಿದೆ. ಅವರು ಇದ್ದಲ್ಲಿಗೆ ರೇಷನ್ ಕೊಡುವುದಾಗಿ ಜಿಲ್ಲಾಡಳಿತ ಹೇಳಿತ್ತು. ಆದರೆ ಥಂಬ್ ತೆಗೆದುಕೊಂಡ್ರೂ ರೇಷನ್ ಮಾತ್ರ ನೀಡಿಲ್ಲ. ಜೊತೆಗೆ ಪ್ರತಿಯೊಬ್ಬರಿಂದ ಥಂಬ್ ಪಡೆಯುವ ವೇಳೆ ಹಣವನ್ನೂ ವಸೂಲಿ ಮಾಡಿದ್ದು, ಪಡಿತರ ಧಾನ್ಯ ಪೂರೈಸದೆ ಸತಾಯಿಸಲಾಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.
ನ್ಯಾಯಬೆಲೆ ಅಂಗಡಿಯ ಮಾಲೀಕನ ವರ್ತನೆಯಿಂದಾಗಿ ಲಾಕ್ಡೌನ್ ಪ್ರದೇಶದ ಬಡವರು ಕಂಗಾಲಾಗುವಂತಾಗಿದೆ. ಕೂಡಲೇ ಪಡಿತರ ಧಾನ್ಯ ವಿತರಿಸುವಂತೆ ಆಗ್ರಹಿಸಿದ್ದಾರೆ. ಶಾಸಕ ಪ್ರಿಯಾಂಕ್ ಖರ್ಗೆ ಈ ಕುರಿತು ಮುತುವರ್ಜಿ ವಹಿಸಿ ಪಡಿತರ ಕೊಡಿಸಲು ನೆರವಾಗಬೇಕೆಂದು ಒತ್ತಾಯಿಸಿದ್ದಾರೆ.