ಕಲಬುರಗಿ: ಹೈದರಾಬಾದ್ ಕರ್ನಾಟಕದ ಆರಾಧ್ಯ ದೈವ ಯಾನಗುಂದಿ ಮಾತಾ ಮಾಣಿಕೇಶ್ವರಿ ದರ್ಶನಕ್ಕೆ ಯಾರ ಅನುಮತಿಯೂ ಅಗತ್ಯವಿಲ್ಲ ಎಂದು ಕಲಬುರಗಿ ಹೈಕೋರ್ಟ್ ಸೂಚಿಸಿತ್ತು. ಅಮ್ಮನವರ ಆರೋಗ್ಯ ಹಾಗೂ ದರ್ಶನ ವಿಷಯವಾಗಿ ಮಾಣಿಕ್ಯಗಿರಿ ಆಶ್ರಮದ ಟ್ರಸ್ಟಿಗಳ ನಡೆ ವಿರುದ್ಧ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಿಡಗುಂದಾ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಸಲ್ಲಿಸಿದ್ದ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಕೈಗೆತ್ತಿಕೊಂಡ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಮತ್ತು ಅಶೋಕ ಜಿ. ನಿಜಗಣ್ಣನವರ ದ್ವಿಸದಸ್ಯ ಪೀಠ, ಅಮ್ಮನವರ ದರ್ಶನಕ್ಕೆ ಭಕ್ತರು ಮುಕ್ತವಾಗಿ ತೆರಳಬಹುದು ಎಂದು ಹೇಳಿದೆ.
ರಾಜ್ಯದಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣಕ್ಕೆ ಕೋರ್ಟ್ ಆದೇಶದಿಂದ ಅಮ್ಮನವರ ಭಕ್ತರಲ್ಲಿದ್ದ ಆತಂಕಕ್ಕೆ ವಿರಾಮ ದೊರೆತಿದೆ. ಅಮ್ಮನವರ ಆಸ್ತಿ ಲಪಟಾಯಿಸಲು ಕೆಲ ಟ್ರಸ್ಟಿಗಳು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿರುವ ಅಮ್ಮನವರನ್ನು ಬಿಡುಗಡೆಗೊಳಿಸಬೇಕು. ತೀವ್ರ ಅನಾರೋಗ್ಯದಿಂದ ಬಳಲುತ್ತಿರುವ ಅಮ್ಮನವರಿಗೆ ಮಹಿಳಾ ಸೇವಕಿ ನೇಮಿಸಬೇಕು. ಭಕ್ತರಿಗೆ ಮುಕ್ತ ದರ್ಶನ ಕಲ್ಪಿಸಬೇಕು. ಅಮ್ಮನವರ ಆರೈಕೆಗೆ ವೈದ್ಯರನ್ನು ನೇಮಿಸಬೇಕು ಮತ್ತು ಅಮ್ಮನವರು ನೆಲೆಸಿರುವ ಕೊಠಡಿಯಲ್ಲಿ ಸೂಕ್ತ ಸೌಲಭ್ಯ ಕಲ್ಪಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದರು.
ಸಾಮಾಜಿಕ ನ್ಯಾಯ ಕಲ್ಪಿಸುವ ಅಡಿ ಅರ್ಜಿಯ ವಿಚಾರಣೆ ನಡೆಸಿದ ಕೋರ್ಟ್, ಅರ್ಜಿದಾರರ ಬಹುತೇಕ ಕೋರಿಕೆಗಳನ್ನು ಪೂರ್ಣಗೊಳಿಸಿದೆ. ಹೈಕೋರ್ಟ್ ಆದೇಶಕ್ಕೆ ಹರ್ಷ ವ್ಯಕ್ತಪಡಿಸಿದ ಸಾಮಾಜಿಕ ಕಾರ್ಯಕರ್ತ ಶಿವಕುಮಾರ ನಿಡಗುಂದಾ, ತಾವು ಅಂದುಕೊಂಡ ಕೆಲ ಕೋರಿಕೆಗಳು ಪೂರ್ಣಗೊಂಡಿವೆ. ಅಮ್ಮನವರಿಗೆ ಆರೋಗ್ಯ ಸೇವೆ ಕಲ್ಪಿಸುವ ಮತ್ತು ಇನ್ನೂ ಕೆಲ ವಿಚಾರಗಳ ಬಗ್ಗೆ ಸುಪ್ರೀಂ ಕೋರ್ಟ್ ಮೊರೆ ಹೋಗುವ ಆಲೋಚನೆಯಲ್ಲಿರುವುದಾಗಿ ತಿಳಿಸಿದ್ದಾರೆ.