ಕಲಬುರಗಿ: ಕೊರೊನಾ ತಡೆಗೆ ಲಾಕ್ಡೌನ್ ಮಾಡಿ ಸುಮಾರು 40 ದಿನಗಳು ಕಳೆದರು ಪರಿಸ್ಥಿತಿ ಎದುರಿಸುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮಾಜಿ ಸಚಿವ ಶರಣ ಪ್ರಕಾಶ ಪಾಟೀಲ್ ಆರೋಪಿಸಿದ್ದಾರೆ.
ಜಿಲ್ಲೆಯ ಕಾಂಗ್ರೆಸ್ ಕಚೇರಿಯಲ್ಲಿ ಮಾತನಾಡಿದ ಅವರು, ಕೊರೊನಾ ವೈರಸ್ ಇನ್ನೂ ಹತೋಟಿಗೆ ಬಂದಿಲ್ಲ, ಕಲ್ಯಾಣ ಕರ್ನಾಟಕ ಭಾಗದ ಜಿಲ್ಲೆಗಳಲ್ಲಿ ಸರಿಯಾಗಿ ವೈದ್ಯಕಿಯ ಸೌಲಭ್ಯವನ್ನು ಸರ್ಕಾರ ಒದಗಿಸಿಲ್ಲ, ಈ ಭಾಗದಲ್ಲಿ ವೆಂಟಿಲೇಟರ್ ಸಮಸ್ಯೆ ಇದೆ. ಬೀದರ್, ಕಲಬುರಗಿ ಹಾಗೂ ಬಳ್ಳಾರಿ ಜಿಲ್ಲೆಯಲ್ಲಿ ಕೊರೊನಾ ಸೋಂಕು ಹೆಚ್ಚಿದೆ. ಆದರೂ ಇಲ್ಲಿವರಗೆ ಅಗತ್ಯ ಸೌಲಭ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.
ರಾಜ್ಯದ ಸಚಿವರ ಮಧ್ಯೆ ಸಮನ್ವಯತೆ ಇಲ್ಲ, ಇದರಿಂದ ರಾಜ್ಯದ ಜನರಿಗೆ ಸಮಸ್ಯೆ ಆಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು ಮೂರ್ನಾಲ್ಕು ಗಂಟೆ ಪಕ್ಷದ ಕಾರ್ಯಕರ್ತರ ಸಭೆ ರೀತಿ ಅಧಿಕಾರಿಗಳ ಜೊತಎ ಸಭೆ ನಡೆಸಿ ಹೋಗುತ್ತಾರೆ. ಸಭೆಯಲ್ಲಿ ಏನೇ ಆದೇಶ ಮಾಡಿದರೂ ಕಾರ್ಯರೂಪಕ್ಕೆ ಬರುತ್ತಿಲ್ಲ. ಮುಂದಿನ ಸಭೆ ವರೆಗೆ ಅಧಿಕಾರಿಗಳಿಗೆ ಕೇಳುವವರೆ ಇಲ್ಲದಂತಾಗುತ್ತಿದೆ ಎಂದು ಡಿಸಿಎಂ ಕಾರಜೋಳ ವಿರುದ್ಧ ಪಾಟೀಲ್ ಆಕ್ರೋಶಗೊಂಡರು.
ಇನ್ನು ಜಿಲ್ಲೆಯಲ್ಲಿ ಕೊರೊನಾ ಟೆಸ್ಟಿಂಗ್ ಸಂಖ್ಯೆ ಹೆಚ್ಚಳ ಮಾಡಬೇಕು. ರೈತರಿಂದ ತರಕಾರಿ, ಹಣ್ಣು ಖರೀದಿ ಮಾಡಬೇಕು. ಕೊರೊನಾ ವಿರುದ್ಧ ಶ್ರಮಿಸುತ್ತಿರುವ ವೈದ್ಯರು ಮತ್ತು ಸಿಬ್ಬಂದಿಗೆ ಅಗತ್ಯ ಸೌಲಭ್ಯ ನೀಡುವಂತೆ ಒತ್ತಾಯಿಸಿದರು.