ಕಲಬುರಗಿ: ಈ ಬಾರಿ ಕಲ್ಯಾಣ ಕರ್ನಾಟಕ ಭಾಗದ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ 10 ಸಾಧಕರಿಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಕಲಬುರಗಿ ಜಿಲ್ಲೆಗೆ 2, ಬಳ್ಳಾರಿಗೆ 3, ಕೊಪ್ಪಳ ಜಿಲ್ಲೆಗೆ 2, ಯಾದಗಿರಿ ಜಿಲ್ಲೆಗೆ 2 ಮತ್ತು ಬೀದರ್ ಜಿಲ್ಲೆಗೆ 1 ಸೇರಿ ಒಟ್ಟು 10 ಮಂದಿಗೆ ಪ್ರಶಸ್ತಿ ಒಲಿದಿದೆ.
ಕರ್ನಾಟಕ ರಾಜ್ಯೋತ್ಸವದ ಅಂಗವಾಗಿ ಪ್ರತಿ ವರ್ಷ ನೀಡಲಾಗುತ್ತಿರುವ ಪ್ರಶಸ್ತಿಗೆ ಈ ವರ್ಷ ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ 66 ಜನ ಸಾಧಕರನ್ನು ಆಯ್ಕೆ ಮಾಡಲಾಗಿದೆ.
ಕಲಬುರಗಿ ಜಿಲ್ಲೆಗೆ ಎರಡು ಪ್ರಶಸ್ತಿ:
ಜಿಲ್ಲೆಗೆ ಈ ಬಾರಿ ಎರಡು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ದೊರಕಿದ್ದು, ಸಂಘ, ಸಂಸ್ಥೆಗಳಿಗೆ ಕೊಡಮಾಡುವ ಪ್ರಶಸ್ತಿಯನ್ನು ಸೇಡಂನ ಶ್ರೀ ಕೊತ್ತಲ ಬಸವೇಶ್ವರ ಶಿಕ್ಷಣ ಸಂಸ್ಥೆಗೆ ನೀಡಿದರೆ ಇನ್ನೊಂದು ಹೈದರಾಬಾದ್ ಕರ್ನಾಟಕ ಏಕೀಕರಣ ಹೋರಾಟಗಾರ ಪ್ರಶಸ್ತಿಯನ್ನು ಭಾರತೀಯ ಜನತಾ ಪಕ್ಷದ ಹಿರಿಯ ಮುತ್ಸದ್ಧಿಯಾದ ಮಹಾದೇವಪ್ಪ ಕಡೆಚೂರ್ ಅವರಿಗೆ ನೀಡಲಾಗಿದೆ.
ಮಹಾದೇವಪ್ಪ ಕಡೆಚೂರ್ ಪರಿಚಯ:
ಹೈದರಾಬಾದ್ ಕರ್ನಾಟಕ ವಿಮೋಚನಾ ಸಂಗ್ರಾಮದ ಹೋರಾಟಗಾರರಾದ 90 ವರ್ಷ ವಯಸ್ಸಿನ ಮಹಾದೇವಪ್ಪ ಕಡೆಚೂರ್ ಅವರು ಶಿಕ್ಷಕ, ಪತ್ರಕರ್ತ, ಉದ್ಯಮಿ, ಕೃಷಿಕ ಅಲ್ಲದೇ ಸಮಾಜ ಸೇವಕರಾಗಿಯೂ ನುರಿತರಾಗಿದ್ದಾರೆ.
ಮೇ 9, 1932ರಲ್ಲಿ ಯಾದಗಿರಿ ಜಿಲ್ಲೆಯ ಸುರಪುರದ ರಂಗಂಪೇಟೆಯಲ್ಲಿ ಜನಿಸಿದ ಕಡೆಚೂರ್ ಅವರು, 1951ರಿಂದ ರಾಷ್ಟ್ರೀಯ ಸ್ವಯಂ ಸೇವಕರಾಗಿ, ಬಿಜೆಪಿ ಕಲಬುರಗಿ ಜಿಲ್ಲಾ ಕೋಶಾಧಿಕಾರಿಯಾಗಿ, ಕಲಬುರಗಿ ಜಿಲ್ಲಾ ಆರ್ಯ ಸಮಾಜ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೆ, ನಗರದ ಸಾಂದೀಪನಿ ಶಾಲೆಯ ಸುಧಾರಣಾ ಸಮಿತಿಯ ಅಧ್ಯಕ್ಷರು, ಕಲಬುರಗಿ ಹೊರವಲಯದ ದೀನದಯಾಳ್ ಉಪಾಧ್ಯಾಯ ನಗರದ ಕೋಶಾಧ್ಯಕ್ಷ ಹಾಗೂ ಕಲಬುರಗಿ ಜಿಲ್ಲಾ ಆರ್ಯ ಈಡಿಗ ಸಮಾಜದ ಕಾರ್ಯದರ್ಶಿ, ಕೋಶಾಧಿಕಾರಿಯೂ ಆಗಿದ್ದರು.
ವೆಂಕಯ್ಯ ಕೂಸಯ್ಯ ಗುತ್ತೇದಾರ ಅವರ ಕುರಿತಾದ ಜೀವನ ಚರಿತ್ರೆ, ಅಂದಿನ ನನ್ನ ಊರು ಮತ್ತು ಬದುಕು, ಸ್ನೇಹ ಸರಪಳಿ ಗೆಳೆಯರ ಪರಿಚಯಾತ್ಮಕ ಕೃತಿ, ಬೆನ್ನಬೆಳಕು ಗುರುಸ್ಮರಣೆ, ಹಾಂಥಿಂತಾಯಿ – ಅನುವಾದ ಕೃತಿ (ಉರ್ದುವಿನಿಂದ), ಅಲ್ಲದೇ ಗುಲ್ಬರ್ಗಾ ಜಿಲ್ಲೆಯ ಜನಸಂಘ ಕಟ್ಟಿ ಬೆಳಸಿದವರು ಎಂಬ ಆರು ಕೃತಿಗಳನ್ನು ಕೂಡ ಪ್ರಕಟಿಸಿದ ಹೆಮ್ಮೆ ಕಡೆಚೂರ್ ಅವರದ್ದಾಗಿದೆ.
ಇದನ್ನೂ ಓದಿ: ಸಾಗರದ ಜಾನಪದ ಪ್ರತಿಭೆ ಗೌರಮ್ಮ ಹುಚ್ಚಪ್ಪ ಮಾಸ್ಟರ್ಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ