ಕಲಬುರಗಿ: ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ 371(ಜೆ) ಅಡಿಯಲ್ಲಿ ಸೌಲಭ್ಯಗಳನ್ನು ಒದಗಿಸುವಂತೆ ಆಗ್ರಹಿಸಿ ಉಪವಾಸ ಸತ್ಯಾಗ್ರಹ ನಡೆಸಲಾಗುತ್ತಿದೆ.
ಈಶಾನ್ಯ ವಲಯ ಶಿಕ್ಷಕರ ವೇದಿಕೆ ಹಾಗೂ ಕಲ್ಯಾಣ ಕರ್ನಾಟಕ ಅನುದಾನರಹಿತ ಖಾಸಗಿ ಶಾಲಾ-ಕಾಲೇಜುಗಳ ಒಕ್ಕೂಟದ ನೇತೃತ್ವದಲ್ಲಿ ನಗರದ ಟೌನ್ಹಾಲ್ನಲ್ಲಿರುವ ಗಾಂಧಿ ಪ್ರತಿಮೆ ಎದುರು ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ. ಈ ವೇಳೆ ಮಾತನಾಡಿದ ಈಶಾನ್ಯ ವಲಯ ಶಿಕ್ಷಕರ ವೇದಿಕೆ ಅಧ್ಯಕ್ಷ ಎಂ.ಬಿ. ಅಂಬಲಗಿ, ಅನುದಾನರಹಿತ ಶಿಕ್ಷಕರು ಉಪನ್ಯಾಸಕರ ನೆರವಿಗೆ ಬರಬೇಕಾದ ಸರ್ಕಾರ ಬೇಜವಾಬ್ದಾರಿಯಿಂದ ವರ್ತಿಸುತ್ತಿದೆ ಎಂದು ಆರೋಪಿಸಿದರು.
371 (ಜೆ) ಅಡಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಕಲಬುರಗಿ, ಬೀದರ್, ಯಾದಗಿರಿ, ರಾಯಚೂರು, ಕೊಪ್ಪಳ ಹಾಗೂ ಬಳ್ಳಾರಿ ಜಿಲ್ಲೆಗಳಲ್ಲಿನ ಅನುದಾನರಹಿತ ಶಾಲಾ-ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿಕ್ಷಕರು ಹಾಗೂ ಉಪನ್ಯಾಸಕರಿಗೆ ಸೌಲಭ್ಯ ಒದಗಿಸಬೇಕು. ಜೊತೆಗೆ ಕೋವಿಡ್ನಿಂದ ತತ್ತರಿಸಿ ಹೋಗಿರುವ ಅನುದಾನ ರಹಿತ ಶಾಲಾ ಶಿಕ್ಷಕರಿಗೆ ಹಾಗೂ ಉಪನ್ಯಾಸಕರಿಗೆ ತಿಂಗಳಿಗೆ 5 ಸಾವಿರ ಸಹಾಯಧನ ನೀಡುವುದು ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿದರು.
ಎಪಿಎಂಸಿ ಕಾಯ್ದೆ ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರ ಸತ್ಯಾಗ್ರಹ
ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತ ವಿರೋಧಿ ನೀತಿ ಅನುಸರಿಸುತ್ತಿವೆ ಎಂದು ಆರೋಪಿಸಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ನಗರದ ಟೌನ್ಹಾಲ್ ಬಳಿಯ ಗಾಂಧಿ ಪ್ರತಿಮೆ ಬಳಿ ಉಪವಾಸ ಸತ್ಯಾಗ್ರಹ ನಡೆಸಿದರು.
ಸರ್ಕಾರಗಳು ಎಪಿಎಂಸಿ ಕಾಯ್ದೆ ಹಾಗೂ ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ಮಾಡುವ ಮೂಲಕ ರೈತರ ಮರಣ ಶಾಸನ ಬರೆಯಲು ಹೊರಟಿವೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಕೂಡಲೇ ಜನವಿರೋಧಿ ಸುಗ್ರೀವಾಜ್ಞೆ ವಾಪಸ್ ಪಡೆಯುವಂತೆ ಆಗ್ರಹಿಸಿದರು.