ಕಲಬುರಗಿ/ ಹೊಸಪೇಟೆ: ಈಶಾನ್ಯ ಕರ್ನಾಟಕ ಶಿಕ್ಷಕರ ಕ್ಷೇತ್ರ ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ನಾಳೆ ಮತದಾನ ಪ್ರಕ್ರಿಯೆ ನಡೆಯಲಿದೆ. ಈ ಹಿನ್ನೆಲೆ ಮತ ಕೇಂದ್ರಗಳತ್ತ ಅಧಿಕಾರಿಗಳು ಮುಖ ಮಾಡಿದ್ದು, ಸಿದ್ಧತೆಯಲ್ಲಿ ತೊಡಗಿದ್ದಾರೆ.
ಈಶಾನ್ಯ ಕರ್ನಾಟಕ ಶಿಕ್ಷಕರ ಮತಕ್ಷೇತ್ರ 6 ಜಿಲ್ಲೆಗಳ ವ್ಯಾಪ್ತಿಯನ್ನೊಳಗೊಂಡಿದ್ದು. ಈಶಾನ್ಯ ಕ್ಷೇತ್ರದಲ್ಲಿ ಒಟ್ಟು 147 ಮತದಾನ ಕೇಂದ್ರ ಸ್ಥಾಪಿಸಲಾಗಿದೆ. ಬಳ್ಳಾರಿ 28, ಬೀದರ್ 34, ಕಲಬುರಗಿ 41, ಯಾದಗಿರಿ 7, ಕೊಪ್ಪಳ 20 ಮತ್ತು ರಾಯಚೂರಿನ 17 ಕಡೆ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.
ಶಾಂತಿಯುತ ಮತದಾನಕ್ಕಾಗಿ ಎಲ್ಲ ಸಿದ್ಧತೆ ಪೂರ್ಣಗೊಂಡಿದ್ದು, ಮತದಾನ ಕೇಂದ್ರಗಳ ಬಳಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಚುನಾವಣಾ ಸಿಬ್ಬಂದಿ ಮತಗಟ್ಟೆಗಳತ್ತ ಸಾಗಿದ್ದಾರೆ.
ಇನ್ನೊಂದೆಡೆ ಹೊಸಪೇಟೆ ತಾಲೂಕಿನಲ್ಲಿ 3 ಮತಗಟ್ಟೆಗಳಲ್ಲಿ ಮತದಾನ ಪ್ರಕ್ರಿಯೆ ನಡೆಯಲಿದೆ ಎಂದು ತಹಶೀಲ್ದಾರ್ ಎಚ್.ವಿಶ್ವನಾಥ್ ಮಾಹಿತಿ ನೀಡಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 10ನೇ ಮತಗಟ್ಟೆ ಸಂಖ್ಯೆ ತಾಲೂಕು ಕಚೇರಿಯ ಕೋರ್ಟ್ ಹಾಲ್, 12ನೇ ಮತಗಟ್ಟೆ ಸಂಖ್ಯೆ ಕಮಲಾಪುರದ ಪಟ್ಟಣ ಪಂಚಾಯಿತಿ ಕಾರ್ಯಾಲಯ ಹಾಗೂ 13ನೇ ಮತಗಟ್ಟೆ ಸಂಖ್ಯೆ ಮರಿಯಮ್ಮನಹಳ್ಳಿಯ ನಾಡ ಕಾರ್ಯಾಲಯದಲ್ಲಿ ಸ್ಥಾಪಿಸಲಾಗಿದೆ ಎಂದಿದ್ದಾರೆ.
ತಾಲೂಕಿನಲ್ಲಿ ಒಟ್ಟು 1,001 ಮತದಾರರಿದ್ದು, 3 ಮೈಕ್ರೋ ಮೇಲ್ವಿಚಾರಕರು, ಮೂವರು ವಿಡಿಯೋಗ್ರಾಫರ್ಸ್ ಸೇರಿದಂತೆ ಇತರ 15 ಜನ ಚುನಾವಣಾ ಸಿಬ್ಬಂದಿ ಹಾಗೂ 1 ವಿಎಸ್‍ಟಿ ಮತ್ತು 1 ಸೆಕ್ಟರ್ ಆಫೀಸರ್ ಕಾರ್ಯ ನಿರ್ವಹಿಸಲಿದ್ದಾರೆ ಎಂದು ತಿಳಿಸಿದರು.
ಇತ್ತ ರಾಯಚೂರು ಜಿಲ್ಲೆಯಲ್ಲಿ ಚುನಾವಣೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2,423 ಪುರುಷರು, 1,104 ಮಹಿಳಾ ಹಾಗೂ ಇತರೆ ಒಬ್ಬರು ಸೇರಿದಂತೆ ಒಟ್ಟು 3,528 ಮಂದಿ ಮತದಾರರಿದ್ದಾರೆ. ಮತದಾನ ಮಾಡಲು ಜಿಲ್ಲೆಯಲ್ಲಿ ಒಟ್ಟು 17 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಅವುಗಳಲ್ಲಿ 7 ಸೂಕ್ಷ್ಮ, 2 ಅತೀ ಸೂಕ್ಷ್ಮ ಮತಗಟ್ಟೆಗಳೆಂದು ಗುರುತಿಸಲಾಗಿದೆ.
ಈಗಾಗಲೇ ಮತಗಟ್ಟೆ ಸುತ್ತಲು ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲಾದ್ಯಂತ ಮದ್ಯ ಮಾರಾಟ ನಿಷೇಧಿಸಿ ಆದೇಶ ಹೊರಡಿಸಲಾಗಿದೆ.
ಪ್ರತಿ ಮತಗಟ್ಟೆಗೆ ಅಗತ್ಯ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ರಾಯಚೂರು 5, ಸಿಂಧನೂರಿನಲ್ಲಿ 1, ಲಿಂಗಸೂಗೂರು 4, ದೇವದುರ್ಗ 4, ಮಾನವಿಯಲ್ಲಿ 3 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ.