ಕಲಬುರಗಿ: ಜಿಲ್ಲೆಯ ಗಡಿಭಾಗ ಆಳಂದ ತಾಲೂಕಿನ ಹೀರೊಳ್ಳಿ ಚೆಕ್ಪೋಸ್ಟ್ನಲ್ಲಿ ಸೇವಾ ಸಿಂಧು ನೋಂದಣಿ ಮಾಡಲು ಹೊರ ರಾಜ್ಯದಿಂದ ಬರುವ ಪ್ರಯಾಣಿಕರಿಂದ ಹಣ ಪಡೆಯುತ್ತಿರುವ ಆರೋಪದ ಹಿನ್ನೆಲೆ, ತಡಕಲ್ ಗ್ರಾಮ ಲೆಕ್ಕಾಧಿಕಾರಿ ಮಲ್ಲಿನಾಥ ಅವರನ್ನ ಅಮಾನತು ಮಾಡಿ ಕಲಬುರಗಿ ಸಹಾಯಕ ಆಯುಕ್ತರು ಆದೇಶಿಸಿದ್ದಾರೆ.
ಮಹಾರಾಷ್ಟ್ರ ಸೇರಿದಂತೆ ಇತರೆ ರಾಜ್ಯಗಳಿಂದ ನೋಂದಣಿ ಮಾಡಿಕೊಳ್ಳದೆ ಆಗಮಿಸುವ ವಲಸೆ ಕಾರ್ಮಿಕರಿಗೆ, ಸೇವಾ ಸಿಂಧು ತಂತ್ರಾಂಶದಲ್ಲಿ ಉಚಿತವಾಗಿ ನೋಂದಣಿ ಮಾಡಿಸಿಕೊಳ್ಳಲು ಇವರನ್ನ ನಿಯೋಜಿಸಲಾಗಿತ್ತು. ಇವರು ಅಲ್ಲಿನ ಪ್ರಯಾಣಿಕರಲ್ಲಿ ಹಣ ವಸೂಲಿ ಮಾಡುತ್ತಿರುವ ಬಗ್ಗೆ ಪ್ರಯಾಣಿಕರು ಧ್ವನಿಸುರುಳಿಯೊಂದಿಗೆ ದೂರು ನೀಡಿದ್ದರು.
ಆರೋಪದಲ್ಲಿ ಮೇಲ್ನೋಟಕ್ಕೆ ಸತ್ಯ ಕಂಡು ಬಂದ ಹಿನ್ನೆಲೆಯಲ್ಲಿ, ಗ್ರಾಮ ಲೆಕ್ಕಾಧಿಕಾರಿ ಮಲ್ಲಿನಾಥ್ ಅವರನ್ನು ಕರ್ನಾಟಕ ನಾಗರೀಕ ಸೇವೆ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು-1957 ನಿಯಮ 10 (1) (ಡಿ) ಅನ್ವಯ ಇಲಾಖಾ ವಿಚಾರಣೆ ಕಾಯ್ದಿರಿಸಿ, ಸೇವೆಯಿಂದ ಅಮಾನತು ಮಾಡಿ ಸಹಾಯಕ ಆಯುಕ್ತರು ಜುಲೈ 8ರಂದು ಆದೇಶ ಹೊರಡಿಸಿದ್ದಾರೆ.