ಕಲಬುರಗಿ: ಜಿಲ್ಲೆಯಲ್ಲಿ ನಡೆಯುವ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ಇತಿಹಾಸದಲ್ಲಿಯೇ ಪ್ರಥಮ ಬಾರಿಗೆ,ಲೇಖಕರ ಕಟ್ಟೆ ನಿರ್ಮಾಣ ಮಾಡಲಾಗುತ್ತಿದೆ.
ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯುವ ಸಮ್ಮೇಳನದ ಪುಸ್ತಕ ಮಳಿಗೆ ಸ್ಥಳದಲ್ಲಿ ಪ್ರತ್ಯೇಕ ಲೇಖಕರ ಕಟ್ಟೆ ನಿರ್ಮಿಸಲಾಗಿದ್ದು, ಲೇಖಕರ ಕಟ್ಟೆಯಲ್ಲಿ ಹೆಸರಾಂತ ಹಿರಿಯ ಸಾಹಿತಿಗಳು, ಲೇಖಕರು ಉಪಸ್ಥಿತರಿರಲಿದ್ದಾರೆ. ಸಮ್ಮೇಳನದ ಸರ್ವಾಧ್ಯಕ್ಷರಾದ ಹೆಚ್.ಎಸ್.ವೆಂಕಟೇಶ ಮೂರ್ತಿ ಅವರು ಸಹ ಲೇಖಕರ ಕಟ್ಟೆಗೆ ಆಗಮಿಸಿ, ಸ್ವಲ್ಪ ಸಮಯ ಕಳೆಯಲಿದ್ದಾರೆ. ಸಾಹಿತ್ಯಾಸಕ್ತರೊಂದಿಗೆ ಯುವ ಲೇಖಕರು, ಸಾಹಿತಿಗಳ ಸಂವಾದ ಏರ್ಪಡಿಸಲಾಗಿದೆ. ಜೊತೆಗೆ ಫೋಟೋಗ್ರಾಫಿ, ಆಟೋಗ್ರಾಫ್ಗೆ ಅವಕಾಶ ಕಲ್ಪಿಸಲಾಗುವುದು ಎಂದು ಲೇಖಕ ವಿಕ್ರಂ ವಿಸಾಜಿ ತಿಳಿಸಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹಿನ್ನೆಲೆಯಲ್ಲಿ, ವಿಶ್ವವಿದ್ಯಾಲಯ ಆವರಣದಲ್ಲಿ 405 ಪುಸ್ತಕ ಮಳಿಗೆ ಸ್ಥಾಪನೆ ಮಾಡಲಾಗಿದೆ. 193 ವಾಣಿಜ್ಯ ಮಳಿಗೆ ಮತ್ತು 20 ಚಿತ್ರಕಲಾ ಮಳಿಗೆ ಸೇರಿ ಒಟ್ಟು 618 ಮಳಿಗೆಗಳನ್ನು ಸ್ಥಾಪಿಸಲಾಗಿದೆ. ಮಳಿಗೆಗಳ ಬಳಿ ಧೂಳು ನಿಯಂತ್ರಣಕ್ಕೆ ಹಸಿರು ಹಾಸಿನ ವ್ಯವಸ್ಥೆ ಮಾಡಲಾಗಿದೆ. ಮಳಿಗೆಯಲ್ಲಿ ಇರುವ ವ್ಯಾಪಾರಿಗಳಿಗೆ ಊಟ ಮತ್ತು ನೀರಿನ ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ಪುಸ್ತಕ ಮತ್ತು ವಾಣಿಜ್ಯ ಮಳಿಗೆ ಸಮಿತಿ ಅಧ್ಯಕ್ಷ ಶಾಸಕ ಅಜಯ್ಸಿಂಗ್ ತಿಳಿಸಿದ್ದಾರೆ.