ಕಲಬುರಗಿ: ಒಂದಲ್ಲ, ಎರಡಲ್ಲ.. ಬರೋಬ್ಬರಿ 25 ವರ್ಷದ ಬಳಿಕ ಸುಪಾರಿ ಕಿಲ್ಲರ್ ಓರ್ವನನ್ನು ಬಂಧಿಸುವ ಮೂಲಕ ಪೊಲೀಸರು ಆರೋಪಿಗೆ ಬಿಸಿ ಮುಟ್ಟಿಸಿದ್ದಾರೆ. 25 ವರ್ಷಗಳಿಂದ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿಕೊಂಡು ತಲೆಮರೆಸಿಕೊಂಡು ಓಡಾಡ್ತಿದ್ದ. ಈತನನ್ನು ಕೊನೆಗೂ ಜಿಲ್ಲೆಯ ನಿಂಬರ್ಗಾ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.
ಪ್ರಕರಣದ ಹಿನ್ನೆಲೆ: ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಅಕ್ಕಲಕೋಟ್ ನಿವಾಸಿಯಾಗಿರುವ ಕರೀಮ್ಸಾಬ್ನನ್ನು ನಿಂಬರ್ಗಾ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. 1997 ರಲ್ಲಿ ಆಳಂದ ತಾಲೂಕಿನ ಹಡಗಿಲ್ ಗ್ರಾಮ ಪಂಚಾಯತ್ ಅಧ್ಯಕ್ಷ ದತ್ತಪ್ಪ ದೊಡ್ಡಮನಿ ಕೊಲೆಗೆ ಸುಪಾರಿ ಪಡೆದಿದ್ದ ಈ ಕರೀಮ್ಸಾಬ್ ಮತ್ತು ಆತನ ಗ್ಯಾಂಗ್ ಕೊಲೆ ಮಾಡಿತ್ತು. ಕೊಲೆ ಸಂಬಂಧ ಹಿಂದೆಯೇ 12 ಜನ ಆರೋಪಿಗಳನ್ನ ಬಂಧಿಸಿ ಜೈಲಿಗೆ ಕಳುಹಿಸಲಾಗಿತ್ತು. ಆದರೆ, ಕೊಲೆಯ ಪ್ರಮುಖ ಆರೋಪಿ ಕರೀಮ್ಸಾಬ್ ಮಾತ್ರ ತಲೆಮರೆಸಿಕೊಂಡು ಓಡಾಡ್ತಿದ್ದ.
ಪೊಲೀಸರು ಕರೀಮ್ಸಾಬ್ಗಾಗಿ ಹಲವು ವರ್ಷಗಳಿಂದ ಹುಡುಕಾಟ ನಡೆಸ್ತಾ ಇದ್ದರು. ಇದರ ನಡುವೆ ಮೊನ್ನೆ ಆತ ಮಹಾರಾಷ್ಟ್ರದ ಸೊಲ್ಲಾಪುರದಿಂದ ಅಕ್ಕಲಕೋಟ್ ಕಡೆ ಹೋಗುವ ಮಾಹಿತಿ ಪಡೆದ ಪೊಲೀಸರು ಆತನನ್ನು ಬಲೆಗೆ ಕೆಡವಿದ್ದಾರೆ.
ಕೊಲೆ ಯಾಕಾಗಿ?: 1997 ರಲ್ಲಿ ಹಡಗಿಲ್ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿದ್ದ ದತ್ತಪ್ಪ ದೊಡ್ಡಮನಿ ರಾಜಕೀಯವಾಗಿ ಬೆಳೆಯೋದಕ್ಕೆ ಮುಂದಾಗಿದ್ದರು. ಅಲ್ಲದೆ ಗ್ರಾಮ ಪಂಚಾಯತ್ ಅಧ್ಯಕ್ಷ ಅನ್ನೋ ಕಾರಣಕ್ಕೆ ಎದುರಾಳಿಗಳಿಗೆ ಅವಾಜ್ ಹಾಕಿ ಫುಲ್ ಸೈಲೆಂಟ್ ಮಾಡಿದ್ದರು. ದತ್ತಪ್ಪ ದೊಡ್ಡಮನಿ ರಾಜಕೀಯವಾಗಿ ಬೆಳೆಯೋದನ್ನ ಕಂಡು ಸದ್ಯ ರಾಜಕೀಯದಲ್ಲಿ ಪ್ರಭಾವಿ ವ್ಯಕ್ತಿಯಾಗಿರುವ ಮತ್ತು ಮಹಾರಾಷ್ಟ್ರದ ಉದ್ಯಮಿಯೊಬ್ಬರು ಆತನನ್ನ ಕೊಲೆ ಮಾಡಬೇಕು ಅಂತಾ ನಿರ್ಧರಿಸಿ ಸುಪಾರಿ ನೀಡಿದ್ದರು. ಅದರಂತೆ ಸುಪಾರಿ ಪಡೆದ ಕರ್ನಾಟಕ ಮತ್ತು ಮಹಾರಾಷ್ಟ್ರದ ಸುಪಾರಿ ಹಂತಕರು ಕಲಬುರಗಿಯಿಂದ ಆಳಂದ ಕಡೆಗೆ ವಾಪಸ್ ಬರ್ತಿದ್ದ ದತ್ತಪ್ಪ ದೊಡ್ಡಮನಿಯ ಹಿಂದೆ ಬಂದು ವೈಜಾಪುರ ಕ್ರಾಸ್ ಬಳಿ ಕೊಲೆ ಮಾಡಿ ಪರಾರಿಯಾಗಿದ್ದರು ಎಂದು ಎಸ್ ಪಿ ಇಶಾ ಪಂತ್ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮೈಸೂರಲ್ಲಿ ಬಾಲಕನ ಮೇಲೆ ಐವರು ಅಪ್ರಾಪ್ತರಿಂದ ಲೈಂಗಿಕ ದೌರ್ಜನ್ಯ.. ವಿಡಿಯೋ ವೈರಲ್- ಆರೋಪಿಗಳು ಅಂದರ್