ಕಲಬುರಗಿ: ರಾಜ್ಯ ಸರ್ಕಾರ ನಿಗದಿಗೊಳಿಸೋ ಕಬ್ಬಿನ ದರಕ್ಕೂ, ಕಾರ್ಖಾನೆಗಳು ನೀಡೋ ದರಕ್ಕೂ ತಾಳ ಮೇಳ ಇಲ್ಲವೆಂದು ಮಾಜಿ ಶಾಸಕ ಬಿ.ಆರ್. ಪಾಟೀಲ ಆರೋಪಿಸಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ಕಬ್ಬಿನ ದರ ನೀಡುವಲ್ಲಿ ಸಕ್ಕರೆ ಕಾರ್ಖಾನೆಗಳಿಂದ ಪ್ರತಿ ವರ್ಷವೂ ಅನ್ಯಾಯವಾಗುತ್ತಿದೆ. ಸರ್ಕಾರ ನಿಗದಿಗೊಳಿಸಿದ ದರವನ್ನು ಸಕ್ಕರೆ ಕಾರ್ಖಾನೆಗಳು ನೀಡುತ್ತಿಲ್ಲ. ಪ್ರತಿ ವರ್ಷವೂ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ವಂಚನೆಯಾಗುತ್ತಿದೆ. ಆಳಂದ ಎನ್.ಎಸ್.ಎಲ್. ಸಕ್ಕರೆ ಕಾರ್ಖಾನೆ ಇದುವರೆಗೆ ದರ ನಿಗದಿಗೊಳಿಸಿಲ್ಲ. ಸರ್ಕಾರ ನಿಗದಿಗೊಳಿಸಿದ ದರ ನೀಡುವುದಾಗಿಯೂ ಪ್ರಕಟಿಸಿಲ್ಲ. ಸರ್ಕಾರ ನಿಗದಿಗೊಳಿಸಿದ ದರ ನೀಡುವಂತೆ ಕಾರ್ಖಾನೆಗಳಿಗೆ ತಾಕೀತು ಮಾಡಬೇಕೆಂದು ಪಾಟೀಲ ಆಗ್ರಹಿಸಿದ್ದಾರೆ.
ಕಲಬುರಗಿ ಹೈಕೋರ್ಟ್ ನೀಡಿದ ಮಧ್ಯಂತರ ಆದೇಶದ ಪ್ರಕಾರ ಕಳೆದ ವರ್ಷ ಪ್ರತಿ ಟನ್ ಗೆ 100 ರೂಪಾಯಿ ನೀಡಬೇಕಿತ್ತು. ಆಳಂದ ಎನ್.ಎಸ್.ಎಲ್. ಕಾರ್ಖಾನೆಯೊಂದರಿಂದಲೇ 6 ಕೋಟಿ ರೂಪಾಯಿ ಬಾಕಿ ಉಳಿಸಿಕೊಂಡಿದ್ದು, ಇದುವರೆಗೂ ಹಣ ನೀಡಿಲ್ಲ. ಕೂಡಲೇ ಬಾಕಿ ಹಣ ಬಿಡುಗಡೆ ಮಾಡಬೇಕು. ಇಲ್ಲದಿದ್ದಲ್ಲಿ ಕಾರ್ಖಾನೆ ಎದುರು ಉಗ್ರ ಹೋರಾಟ ಮಾಡೋದಾಗಿ ಮಾಜಿ ಶಾಸಕರು ಎಚ್ಚರಿಸಿದ್ದಾರೆ.