ಕಲಬುರಗಿ: ತಾಲೂಕಿನ ಅಲ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಗ್ಯಾಸ್ ಸಿಲಿಂಡರ್ ಇಲ್ಲದ ನೆಪವೊಡ್ಡಿ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲವೆಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ಮಾಡಿದರು.
ಕಳೆದ ಮೂರು ತಿಂಗಳಿಂದ ಶಾಲೆಯಲ್ಲಿ ಮಧ್ಯಾಹ್ನದ ಬಿಸಿಯೂಟ ನೀಡುತ್ತಿಲ್ಲ. ಹೀಗಾಗಿ ಶಾಲೆಯಲ್ಲಿ ಒಟ್ಟು 74 ವಿದ್ಯಾರ್ಥಿಗಳು ಮಧ್ಯಾಹ್ನದ ಊಟವಿಲ್ಲದೆ ಪರದಾಡುತ್ತಿರುವುದಾಗಿ ಪ್ರತಿಭಟನೆ ವೇಳೆ ಅಳಲು ತೋಡಿಕೊಂಡರು.
ಊಟ ಕೇಳಿದರೆ ಅಡುಗೆ ಅನಿಲ ಬಂದಿಲ್ಲವೆಂದು ಶಿಕ್ಷಕರು ನೆಪ ಹೇಳುತ್ತಿದ್ದಾರೆ. ಮುಖ್ಯ ಶಿಕ್ಷಕರಿಗೆ ಕೇಳಿದರೆ ಗ್ಯಾಸ್ ಸಿಲಿಂಡರ್ ಬರದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದಿದ್ದೇನೆ. ಗ್ಯಾಸ್ ಬರುವವರೆಗೆ ಏನೂ ಮಾಡಲೂ ಸಾಧ್ಯವಿಲ್ಲ ಎಂದು ಅಸಹಾಯಕತೆ ವ್ಯಕ್ತ ಪಡಿಸುತ್ತಿದ್ದಾರೆ ಎಂದು ವಿದ್ಯಾರ್ಥಿಗಳು ಹೇಳಿದ್ರು.
ಹಾಗಾಗಿ ತಕ್ಷಣ ಪರ್ಯಾಯ ವ್ಯವಸ್ಥೆ ಮಾಡುವ ಮೂಲಕ ಬಿಸಿಯೂಟ ಪ್ರಾರಂಭ ಮಾಡಬೇಕು. ಮಕ್ಕಳಿಗೆ ಬಿಸಿಯೂಟ ವಂಚಿಸಿದ ವ್ಯಕ್ತಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವಂತೆ ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಒತ್ತಾಯಿಸಿದ್ದಾರೆ.