ಕಲಬುರಗಿ: ಮಕ್ಕಳಲ್ಲಿ ಶಿಶ್ತು ಬದ್ಧ ಜೀವನಶೈಲಿ ರೂಪಿಸುವ ನಿಟ್ಟಿನಲ್ಲಿ ಜಿಲ್ಲೆಯ ಹಲವೆಡೆ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಇಂದಿನ ಜೀವನ ಶೈಲಿ ಹಾಗೂ ಮೊಬೈಲ್ ಗೀಳಿನಿಂದ ಮಕ್ಕಳ ಮೇಲೆ ದುಷ್ಪರಿಣಾಮ ಬೀರಿ ಅಡ್ಡದಾರಿ ಹಿಡಿಯುತ್ತಿರುವ ಘಟನೆಗಳು ಆಗಾಗ ಬೆಳಕಿಗೆ ಬರುತ್ತಲೇ ಇವೆ.
ಹೀಗಾಗಿ ಮಕ್ಕಳಲ್ಲಿ ಶಿಸ್ತು ಆದರ್ಶ ನೈತಿಕತೆ ಜೀವನ ಕುರಿತಾಗಿ ಮತ್ತು ಕಾನೂನು ಅರಿವು ಮೂಡಿಸಲು ಜಿಲ್ಲೆಯ ಚಿತ್ತಾಪುರ ತಾಲೂಕಿನ ಮಾಡಬೂಳ್ ಗ್ರಾಮದಲ್ಲಿರುವ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಕಾರ್ಯಕ್ರಮಕ್ಕೆ ಕಲಬುರಗಿ ಜಿಲ್ಲಾಧಿಕಾರಿ ಯಶವಂತ್ ಗುರುಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಇಶಾ ಪಂತ್ ಚಾಲನೆ ನೀಡಿದರು.
ಆದರ್ಶಮಯ ಜೀವನ ನಡೆಸುವ ಬಗ್ಗೆ ನುರಿತವರಿಂದ ಮಕ್ಕಳಿಗೆ ಜ್ಞಾನ ನೀಡಲಾಯಿತು. ಇದೇ ವೇಳೆ ಮಕ್ಕಳು ಧೈರ್ಯಶಾಲಿಯಾಗಿ ಕಷ್ಟಗಳ ನಿಭಾಯಿಸುವುದು ಬಗ್ಗೆ, ಕಾನೂನುಗಳ ಬಗ್ಗೆ ಜಾಗೃತಿ ನೀಡುವ ಮೂಲಕ ಪರಿಪೂರ್ಣ ಉತ್ತಮ ನಾಗರೀಕರಾಗುವ ಬಗ್ಗೆ ತಿಳಿ ಹೇಳಲಾಯಿತು.
ಇನ್ನು, 2010 ರಲ್ಲಿಯೇ ಭಾರತ ಸರ್ಕಾರ ಇಂತಹದೊಂದು ಯೋಜನೆಯನ್ನು ಕೇರಳದಲ್ಲಿ ಜಾರಿಗೊಳಿಸಿತ್ತು. ನಂತರ 2015 ರಲ್ಲಿ ಕರ್ನಾಟಕದಲ್ಲಿ ಯೋಜನೆ ಕೇಲ ಜಿಲ್ಲೆಗಳಲ್ಲಿ ಮಾತ್ರ ಜಾರಿಯಾಗಿತ್ತು. ಬಳಿಕ ಕೋವಿಡ್ ಕಾರಣಕ್ಕೆ ಶಾಲೆಗಳು ಮುಚ್ಚಿ ಯೋಜನೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು.
ಇದೀಗ ಜಿಲ್ಲೆಯಲ್ಲಿ ಅಪ್ರಾಪ್ತ ಬಾಲಕಿ ಮೇಲೆ ಅಪ್ರಾಪ್ತ ಬಾಲಕನೇ ಅತ್ಯಾಚಾರವೆಸಗಿದ ಘಟನೆ, ಅನೇಕ ಅಪ್ರಾಪ್ತ ಬಾಲಕರು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದನ್ನು ಮನಗಂಡ ಎಸ್ಪಿ ಇಶಾ ಪಂತ್, ಮಕ್ಕಳಲ್ಲಿ ಶಿಸ್ತು ಮತ್ತು ಕಾನೂನು ಅರಿವು ಮೂಡಿಸಬೇಕು ಅನ್ನೋ ಉದ್ದೇಶದಿಂದ ವಿದ್ಯಾರ್ಥಿ ಪೊಲೀಸ್ ಕೆಡೆಟ್ ಯೋಜನೆಗೆ ಮರು ಚಾಲನೆ ನೀಡಲಾಗಿದೆ.
ಇದನ್ನೂ ಓದಿ: ಡಿಸೆಂಬರ್ ಒಳಗೆ ವಿಷ್ಣುವರ್ಧನ್ ಸ್ಮಾರಕ ಉದ್ಘಾಟನೆ: ಸಿಎಂ ಬೊಮ್ಮಾಯಿ