ಕಲಬುರಗಿ: ಕಳೆದ ವಾರ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ ಅವರಿಗೆ ಸಚಿವ ಸ್ಥಾನ ನೀಡದಿದ್ದರೆ 10 ಜನ ಶಾಸಕರ ರಾಜೀನಾಮೆ ಕೊಡಿಸುತ್ತೇನೆ ಎಂದು ಸಿಎಂಗೆ ಬಹಿರಂಗ ಧಮ್ಕಿ ಹಾಕಿದ್ದ ಶ್ರೀಶೈಲ ಸಾರಂಗಧರ ದೇಶಿಕೇಂದ್ರ ಸ್ವಾಮೀಜಿಯ ಭಾಗ-2 ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಕೆಲ ದಿನಗಳ ಹಿಂದೆ ಕಾಂಗ್ರೆಸ್ ಮುಖಂಡನ ಹುಟ್ಟುಹಬ್ಬದ ಸಮಾರಂಭದಲ್ಲಿ ಎಐಸಿಸಿ ಪ್ರಧಾನ ಕಾರ್ಯದರ್ಶಿ, ಮಾಜಿ ಸಂಸದ ಮಲ್ಲಿಕಾರ್ಜುನ ಖರ್ಗೆ ಪರ ಸ್ವಾಮೀಜಿ ಬ್ಯಾಟಿಂಗ್ ಮಾಡಿರುವ ವಿಡಿಯೋ ಇದಾಗಿದೆ. ಖರ್ಗೆ 50 ವರ್ಷ ಸೇವೆ ಮಾಡಿದ್ರು, ಸರ್ಕಸ್ ಮಾಡಲಿಲ್ಲ. ಸೇವೆ ಮಾಡಿದ ಅವರನ್ನು ಆ ಭಾಗದ ಜನ ಕೆಡವಿದರು. ಮಾತಿಗೆ ಮರಳಾಗಿ ಚುನಾವಣೆಯಲ್ಲಿ ಖರ್ಗೆ ಅವರನ್ನು ಸೋಲಿಸಿದ್ರು ಎಂದಿದ್ದಾರೆ. ಅಂಬೇಡ್ಕರ್ ಅವರಿಗೆ ಆದಷ್ಟೇ ನೋವು ಖರ್ಗೆ ಅವರಿಗೂ ಆಗಿದೆ. ಆದ್ರೆ ಖರ್ಗೆ ಅವರು ನೋವು ತೋರಿಸಿಕೊಳ್ಳುವುದಿಲ್ಲ. ಜೂನ್ನಲ್ಲಿ ಖರ್ಗೆ ರಾಜ್ಯಸಭಾ ಸದಸ್ಯರಾಗುತ್ತಾರೆ ಎಂದು ಸ್ವಾಮೀಜಿ ಭವಿಷ್ಯ ನುಡಿದಿದ್ದಾರೆ.
ಈ ಹಿಂದೆ ಬಿಜೆಪಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರಗೆ ಸಚಿವ ಸ್ಥಾನ ನೀಡುವಂತೆ ಸಿಎಂ ಗೆ ಸ್ವಾಮೀಜಿ ಬಹಿರಂಗ ಎಚ್ಚರಿಕೆ ನೀಡಿದ್ರು. ಇದರ ಬೆನ್ನಲ್ಲೇ ಖರ್ಗೆ ಪರವಾಗಿ ಸ್ವಾಮೀಜಿ ಮಾತನಾಡಿರುವ ವಿಡಿಯೋ ಟಿಕ್ ಟಾಕ್, ಫೇಸ್ಬುಕ್, ವಾಟ್ಸ್ಆ್ಯಪ್ ಸೇರಿದಂತೆ ಸಾಮಾಜಿಕ ಜಾಲತಾಣದಲ್ಲಿ ಸ್ವಾಮೀಜಿ ಭಾಗ-2 ಎಂಬ ಹೆಸರಲ್ಲಿ ಹರಿದಾಡುತ್ತಿದೆ. ಈ ಮೂಲಕ ಸ್ವಾಮೀಜಿ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗಿದ್ದಾರೆ.