ಕಲಬುರಗಿ: ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಖಾಸಗಿ ಶಿಕ್ಷಣ ಸಂಸ್ಥೆಯ ಅತಿಥಿ ಶಿಕ್ಷಕರು ಹಾಗೂ ಶಿಕ್ಷಣ ಉಳಿಸಿ ಸಮಿತಿ ಜಂಟಿಯಾಗಿ ವಾಡಿ ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಬದುಕು ರೂಪಿಸುವ ಶಿಕ್ಷಕರ ಭವಿಷ್ಯವೇ ಸಂಕಷ್ಟದಲ್ಲಿ ಸಿಲುಕಿದೆ. ಕೇಂದ್ರ ಸರ್ಕಾರದಿಂದ ಆಟೋ ಚಾಲಕರಿಗೆ, ಕ್ಷೌರಿಕರಿಗೆ ಕೋವಿಡ್ ವಿಶೇಷ ಪ್ಯಾಕೇಜ್ ಘೋಷಿಸಲಾಗಿದೆ. ಆದರೆ, ಖಾಸಗಿ ಶಿಕ್ಷಕರಿಗೆ ಯಾವುದೇ ಪ್ಯಾಕೇಜ್ ಇಲ್ಲ ಎಂಬುದು ಶಿಕ್ಷಕರ ಆಕ್ರೋಶಕ್ಕೆ ಕಾರಣವಾಗಿದೆ. ಸರ್ಕಾರ ಈ ನಿಟ್ಟಿನಲ್ಲಿ ಮಲತಾಯಿ ಧೋರಣೆ ತೋರುತ್ತಿದೆ ಎಂದು ಅತಿಥಿ ಶಿಕ್ಷಕಿ ಶ್ರೀದೇವಿ ಎಸ್.ಮಲ್ಕಂಡಿ ಆರೋಪಿಸಿದರು.
ಕೂಡಲೇ ಸರ್ಕಾರಗಳು ಅತಿಥಿ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಒದಗಿಸಬೇಕು. ಸದ್ಯ ಎಷ್ಟೋ ಶಿಕ್ಷಕರು ದಿನಗೂಲಿ, ಕಟ್ಟಡ ಕೆಲಸಗಳಿಗೆ ತೆರಳುವಂತಾಗಿದೆ ಎಂದು ಅತಿಥಿ ಶಿಕ್ಷಕ ಯೇಶಪ್ಪ ಕೇದಾರ್ ಹೇಳಿದರು.
ಸಮಾಜ ರೂಪಿಸುವಲ್ಲಿ ಶಿಕ್ಷಕರು, ಉಪನ್ಯಾಸಕರ ಪಾತ್ರ ಅತ್ಯಮೂಲ್ಯವಾಗಿದ್ದು, ಭವಿಷ್ಯದ ಪೀಳಿಗೆಗೆ ದಾರಿ ತೋರಿಸುವವರ ಜೀವನಕ್ಕೆ ಭದ್ರತೆ ನೀಡಬೇಕಿದೆ. ಶೀಘ್ರವೇ ಅತಿಥಿ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಶಿಕ್ಷಣ ಉಳಿಸಿ ಸಮಿತಿ ಸದಸ್ಯರಾದ ವಿ.ಕೆ.ಪದ್ಮರೇಖಾ ತಿಳಿಸಿದರು.