ಕಲಬುರಗಿ: ಸೊನ್ನ ಬ್ಯಾರೇಜ್ನಿಂದ ಭಾರೀ ಪ್ರಮಾಣದ ನೀರು ಹರಿ ಬಿಡಲಾಗುತ್ತಿದ್ದು, ಕಲಬುರಗಿ, ವಿಜಯಪುರ ಜಿಲ್ಲೆಯ ಹಲವು ನದಿ ಪಾತ್ರದ ಗ್ರಾಮಗಳಲ್ಲಿ ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.
ಮಹಾರಾಷ್ಟ್ರದ ಉಜ್ಜೈನಿ ಮತ್ತು ವೀರ್ ಡ್ಯಾಂನಿಂದ ಕ್ರಮವಾಗಿ 23000 ಮತ್ತು 5100 ಕ್ಯೂಸೆಕ್ ನೀರು ಇಂದು ಭೀಮಾ ನದಿಗೆ ಹರಿದು ಬಂದಿದೆ. ಅಲ್ಲದೆ ಬ್ಯಾರೇಜ್ನ ಜಲಾನಯನ ಪ್ರದೇಶದಲ್ಲಿ ಸತತ ಮಳೆಯಾಗುತ್ತಿರುವುದರಿಂದ ಅಫಜಲಪೂರ ತಾಲೂಕಿನ ಸೊನ್ನ ಬ್ಯಾರೇಜ್ಗೆ ಇಂದು ಸಾಯಂಕಾಲ 65,000 ಕ್ಯೂಸೆಕ್ ನೀರು ಬಂದು, ಒಳಹರಿವು ಹೆಚ್ಚಾಗಿ ಬ್ಯಾರೇಜ್ ಭರ್ತಿಯಾಗಿದೆ.
ಹೀಗಾಗಿ 65 ಸಾವಿರ ಕ್ಯೂಸೆಕ್ ನೀರು ಹೊರಬೀಡಲಾಗಿದೆ. ಒಳಹರಿವು ಇನ್ನೂ ಹೆಚ್ಚಾಗುವ ಸಾಧ್ಯತೆಯಿದ್ದು, ಒಳಹರಿವಿನಷ್ಟೇ ಪ್ರಮಾಣದ ನೀರು ಭೀಮಾನದಿಗೆ ಬಿಡುಗಡೆ ಮಾಡಲಾಗುತ್ತದೆ.
ಆದ್ದರಿಂದ ಸೊನ್ನ ಬ್ಯಾರೇಜ್ ಕೆಳಭಾಗದಲ್ಲಿರುವ ಅಫಜಲಪುರ, ಜೇವರ್ಗಿ, ಚಿತ್ತಾಪುರ, ಕಲಬುರಗಿ ತಾಲೂಕುಗಳು ಹಾಗೂ ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬ್ಯಾರೇಜ್ ಕೆಳಗಡೆ ಬರುವ ಭೀಮಾ ನದಿಯ ದಡದ ಗ್ರಾಮಗಳ ರೈತರು ನದಿಯ ದಡಕ್ಕೆ ಹೋಗಬಾರದು. ಅಲ್ಲದೇ ತಮ್ಮ ಜಾನುವಾರುಗಳನ್ನು ನದಿಯ ದಡಕ್ಕೆ ಬಿಡದಂತೆ ಎಚ್ಚರ ವಹಿಸಬೇಕು. ಅದೇ ರೀತಿ ಸೊನ್ನ ಬ್ಯಾರೇಜಿನ ಕೆಳಗಡೆ ಬರುವ ಇನ್ನಿತರ ಬ್ಯಾರೇಜ್‍ಗಳ ಅಧಿಕಾರಿಗಳು ಎಚ್ಚರವಹಿಸಲು ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ಕೆ.ಎನ್.ಎನ್.ಎಲ್. ಭೀಮಾ ಏತ ನೀರಾವರಿ ಯೋಜನೆಯ ಕಾರ್ಯಪಾಲಕ ಅಭಿಯಂತ ಅಶೋಕ ಆರ್. ಕಲಾಲ್ ತಿಳಿಸಿದ್ದಾರೆ.