ಕಲಬುರಗಿ: ಮದುವೆಯಾಗಿ ಆರು ತಿಂಗಳಲ್ಲಿಯೇ ಗಂಡ ಹೆಂಡತಿ ನಡುವೆ ನಡೆದ ಕಲಹಕ್ಕೆ ಒಂದು ಕೊಲೆ ಇನ್ನೊಂದು ಆತ್ಮಹತ್ಯೆ ನಡೆದಿರುವ ಘಟನೆ ಜಿಲ್ಲೆಯ ಚಿಂಚೋಳಿ ತಾಲೂಕಿನ ಚಿಂತಪಳ್ಳಿ ಗ್ರಾಮದಲ್ಲಿ ನಡೆದಿದೆ. ಹೆಣ್ಣು ಕೊಟ್ಟ ಮಾವನನ್ನು ಕೊಂದು ಬಳಿಕ ತಾನೂ ಕೂಡಾ ವಿದ್ಯುತ್ ಕಂಬಕ್ಕೆ ಏರಿ ಕರೆಂಟ್ ಹೊಡಸಿಕೊಂಡು ಅಳಿಯ ಸಾವನ್ನಪ್ಪಿದ ದುರಂತ ನಡೆದಿದೆ.
ಮಹಾರಾಷ್ಟ್ರದ ಸೋಲ್ಲಾಪುರ ಜಿಲ್ಲೆ ಬಾರಸಿಭೋಂಜಿ ಗ್ರಾಮದ ನಿವಾಸಿ ಗೋರಕನಾಥ ಗಾಯಕವಾಡ್ (30) ವಿದ್ಯುತ್ ಕಂಬಕ್ಕೆ ಏರಿ ಕರೆಂಟ್ ಹೊಡೆಸಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇದಕ್ಕೂ ಮುನ್ನ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಮಾವ ಈರಪ್ಪ ಕೋಡ್ಲಿ (64) ಅವರ ತೆಲೆ ಮೇಲೆ ಕಲ್ಲು ಹಾಕಿ ಬರ್ಬರ ಹತ್ಯೆ ಮಾಡಿದ್ದಾನೆ.
ಆತ್ಮಹತ್ಯೆಗೆ ಶರಣಾದ ಗೋರಕನಾಥ ಜೊತೆ ಈರಪ್ಪ ಅವರ ಏಕೈಕ ಪುತ್ರಿ ವೈಶಾಲಿ ಎಂಬುವವರ ಮದುವೆ ಆರು ತಿಂಗಳ ಹಿಂದೆ ನಡೆದಿತ್ತು. ಐದು ತಿಂಗಳ ಕಾಲ ಗಂಡನ ಮನೆಯಲ್ಲಿದ್ದ ವೈಶಾಲಿ ಪತಿಯೊಂದಿಗೆ ಜಗಳವಾಡಿ ಕಳೆದ 15 ದಿನಗಳ ಹಿಂದೆ ತವರು ಮನೆ ಸೇರಿದ್ದರು. ಹೇಗಾದರೂ ಮನವೊಲಿಸಿ ಹೆಂಡತಿಯನ್ನು ತನ್ನೊಂದಿಗೆ ಕರೆದುಕೊಂಡು ಹೋದರಾಯ್ತು ಅಂತ ಚಿಂತಪಳ್ಳಿ ಗ್ರಾಮಕ್ಕೆ ಗೊರಕನಾಥ ಆಗಮಿಸಿದ್ದಾನೆ. ಆದರೆ ದಸರಾ ದೀಪಾವಳಿ ಹಬ್ಬ ಇರುವ ಪ್ರಯುಕ್ತ ಮಾವನ ಮನೆಯವರು ಮಗಳನ್ನು ಕಳಿಸಿಕೊಟ್ಟಿಲ್ಲ. ಹೀಗಾಗಿ ಹೆಂಡತಿ ಕರೆದುಕೊಂಡು ಹೋಗಲೇಬೇಕು ಎಂದು ಹೆಂಡತಿ ತವರಿನಲ್ಲಿಯೇ ಗೋರಕನಾಥ ಉಳಿಕೊಂಡಿದ್ದನಂತೆ.
ನಿನ್ನೆ ಮಾವ ಈರಪ್ಪ ಗ್ರಾಮದ ಹೊರವಲಯದಲ್ಲಿರುವ ತಮ್ಮ ಜಮೀನಿಗೆ ಹೋಗಿದ್ದಾರೆ. ಗೋರಕನಾಥ ಕೂಡಾ ಹೋಲಕ್ಕೆ ಜತೆಗೆ ಹೋಗಿದ್ದಾನೆ. ಈ ವೇಳೆ ಇಬ್ಬರ ಮಧ್ಯೆ ಏನಾಗಿದೆ ಎಂಬುದು ತಿಳಿದು ಬಂದಿಲ್ಲ. ಮಾವನ ತೆಲೆ ಮೇಲೆ ಕಲ್ಲು ಹಾಕಿ ಕೊಲೆ ಮಾಡಿದ ಅಳಿಯ ಗೋರಕನಾಥ ಮರಳಿ ಮನೆಗೆ ಬಂದಿದ್ದಾನೆ. ಬಟ್ಟೆ ಮೇಲೆ ರಕ್ತದ ಕಲೆಗಳು ಅಂಟಿರುವುದು ಕಂಡು ಗಾಬರಿಯಾದ ಕುಟುಂಬಸ್ಥರು ಹೊಲದ ಕಡೆ ಓಡಿ ಹೋಗ್ತಿದಂಗೆ ಇತ್ತ ಗ್ರಾಮದಲ್ಲಿ ವಿದ್ಯುತ್ ಕಂಬವನ್ನು ಹತ್ತಿ ಕರೆಂಟ್ ಶಾಕ್ ಹೊಡಿಸಿಕೊಂಡು ಗೋರಕನಾಥ ಕೂಡಾ ಆತ್ಮಹತ್ಯೆಗೆ ಶರಣಾಗಿದ್ದಾನೆ. ಸುದ್ದಿ ತಿಳಿಯುತ್ತಿದಂತೆ ಸುಲೇಪೇಠ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲನೆ ಮಾಡಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸೂಕ್ತ ಕಾರಣ ತಿಳಿದು ಬಂದಿಲ್ಲ. ಈ ಸಂಬಂಧ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ: ಬೆಳಗಾವಿ: ಕುಂದಾನಗರಿ ರಾಜ್ಯೋತ್ಸವ ಸಂದರ್ಭದಲ್ಲಿ ಇಬ್ಬರು ಯುವಕರಿಗೆ ಚಾಕು ಇರಿತ