ಕಲಬುರಗಿ : ಜಿಲ್ಲೆಯಲ್ಲಿ ಕೊರೊನಾ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆ ಕಲಬುರಗಿ ನಗರವನ್ನು ಲಾಕ್ಡೌನ್ ಮಾಡಲು ಜಿಲ್ಲಾಡಳಿತ ಮುಂದಾಗಿದೆ. ಈ ಹಿನ್ನೆಲೆ ಕಲಬುರ್ಗಿಯ ಆರಾಧ್ಯ ದೈವ ಎನ್ನಲಾಗಿರುವ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.
ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಕಲಬುರಗಿ ಜಿಲ್ಲಾಧಿಕಾರಿ ಶರತ್ ಪತ್ರ ಬರೆದಿದ್ದು, ಸೋಂಕು ನಿಯಂತ್ರಣದ ನಿಟ್ಟಿನಲ್ಲಿ ದೇವಸ್ಥಾನ ಬಂದ್ ಮಾಡುವಂತೆ ಮನವಿ ಮಾಡಿದ್ದರು. ಈ ಹಿನ್ನೆಲೆ, ಲಾಕ್ಡೌನ್ ಜಾರಿಗೆ ಮುಂಚಿತವಾಗಿಯೇ ಐತಿಹಾಸಿಕಿ ಶರಣಬಸವೇಶ್ವರ ದೇವಸ್ಥಾನವನ್ನು ಬಂದ್ ಮಾಡಲಾಗಿದೆ.
ಇನ್ನು ಈ ದೇವಾಲಯಕ್ಕೆ ಬರುವ ಭಕ್ತರು ರಸ್ತೆ ಬದಿಯಿಂದಲೇ ನಮಸ್ಕರಿಸಿ ವಾಪಸ್ ಹೋಗುತ್ತಿದ್ದಾರೆ. ಗಾಣಗಾಪುರದ ದತ್ತಾತ್ರೇಯ ಹಾಗೂ ಘತ್ತರಗಿಯ ಭಾಗಮ್ಮ ದೇವಸ್ಥಾನ ದರ್ಶನ ಇದುವರೆಗೂ ಪ್ರಾರಂಭಗೊಂಡಿಲ್ಲ. ಶರಣಬಸವೇಶ್ವರ ದೇವಸ್ಥಾನದಲ್ಲಿ ಬೆಳಗ್ಗೆ ಮತ್ತು ಸಂಜೆಗೆ ದರ್ಶನಕ್ಕೆ ಅವಕಾಶ ನೀಡಲಾಗಿತ್ತು. ಆದರೆ, ಈಗ ಅದನ್ನೂ ಬಂದ್ ಮಾಡಲಾಗಿದೆ.