ಕಲಬುರಗಿ: ಚಿಂಚೋಳಿ ತಾಲೂಕಿನ ಕುಂಚಾವರಂ ಠಾಣಾ ವ್ಯಾಪ್ತಿಯ ವಸತಿ ಶಾಲೆಯ ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ವಸತಿ ಶಾಲೆಗೆ ಭೇಟಿ ನೀಡಿದ್ದ ಸಂಸದ ಉಮೇಶ ಜಾಧವ ಹಾಗೂ ಜಿಲ್ಲಾಧಿಕಾರಿ ಯಶವಂತ ಗುರುಕರ್ ಅವರಿಗೆ ಸ್ಥಳೀಯರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ.
ಸಮಾಜ ಕಲ್ಯಾಣ ಇಲಾಖೆ ಅಧಿನಕ್ಕೊಳಪಡುವ ವಸತಿ ಶಾಲೆಯ ಹೈಸ್ಕೂಲ್ ವಿದ್ಯಾರ್ಥಿನಿಯರಿಗೆ ಪ್ರಾಚಾರ್ಯ ಚೇತನ್ ರೆಡ್ಡಿ ಮತ್ತು ಕಂಪ್ಯೂಟರ್ ಆಪರೇಟರ್ ಸಂಗಮೇಶ ಲೈಂಗಿಕ ಕಿರುಕುಳ ನೀಡಿರುವ ಗಂಭೀರ ಆರೋಪ ಕೇಳಿ ಬಂದಿದೆ. ಅಲ್ಲದೇ, ಸಂಗಮೇಶನಿಗೆ ಸಾರ್ವಜನಿಕರು ಹಿಗ್ಗಾಮುಗ್ಗಾ ಥಳಿಸಿರುವ ಘಟನೆ ಕೂಡ ನಡೆದಿದೆ. ಗಂಭೀರ ಆರೋಪದ ಹಿನ್ನಲೆ ಸಂಸದ ಉಮೇಶ ಜಾಧವ, ಡಿಸಿ ಯಶವಂತ ಗುರುಕರ್ ಶಾಲೆಗೆ ಭೇಟಿ ನೀಡಿದ್ದರು. ಆದರೆ, ವಿದ್ಯಾರ್ಥಿನಿಯರ ಸಮಸ್ಯೆ ಆಲಿಸದೇ ಕೇವಲ ಅಧಿಕಾರಿಗಳಿಂದ ಮಾಹಿತಿ ಪಡೆದು ಅತಿಥಿ ಗೃಹಕ್ಕೆ ತೆರಳಿದರು ಎಂದು ಸ್ಥಳೀಯರು ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.
![sexual-harassment-case-outrage-against-mp-and-dc](https://etvbharatimages.akamaized.net/etvbharat/prod-images/16363167_thumb-1111.jpg)
ಸದ್ಯ ಇಬ್ಬರ ಆರೋಪಿಗಳ ವಿರುದ್ಧ ಪೊಕ್ಸೊ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ. ಪೊಲೀಸರು ಇಬ್ಬರನ್ನೂ ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಇನ್ನು ಇಬ್ಬರನ್ನು ಸೇವೆಯಿಂದ ಅಮಾನತ್ತು ಮಾಡಲಾಗಿದೆ. ಶಾಲೆಗೆ ಮಹಿಳಾ ವಾರ್ಡನ್, ಮಹಿಳಾ ಕಂಪ್ಯೂಟರ್ ಆಪರೇಟರ್ ಮತ್ತು ಮಹಿಳಾ ಪ್ರಾಂಶುಪಾಲರನ್ನು ನಿಯೋಜಿಸಲು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಡಿಸಿ ಯಶವಂತ ಗುರುಕರ ತಿಳಿಸಿದ್ದಾರೆ.
ಬಿಜೆಪಿ ಸದಸ್ಯತ್ವ ಪಡೆದಿದ್ದ ಪ್ರಾಂಶುಪಾಲ: ಆರೋಪಿ ಸ್ಥಾನದಲ್ಲಿರುವ ವಸತಿ ಶಾಲೆಯ ಪ್ರಾಂಶುಪಾಲ ಚೇತನ ರೆಡ್ಡಿ ಬಿಜೆಪಿ ಸದಸ್ಯತ್ವ ಪಡೆದಿದ್ದಾನೆ ಎನ್ನಲಾಗಿದೆ. ಬಿಜೆಪಿ ಸದಸ್ಯತ್ವ ಮಾತ್ರವಲ್ಲ, ವಸತಿ ಸಚಿವ ವಿ.ಸೋಮಣ್ಣ, ಸಂಸದ ಉಮೇಶ್ ಜಾಧವ್ ಹಾಗೂ ಬಿಜೆಪಿ ಇತರೆ ನಾಯಕರೊಂದಿಗೆ ಮತ್ತು ಆರ್ಎಸ್ಎಸ್ ಸಮವಸ್ತ್ರದಲ್ಲಿರುವ ಪೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
ಇದನ್ನೂ ಓದಿ: ವಿದ್ಯಾರ್ಥಿನಿಯರಿಗೆ ಲೈಂಗಿಕ ಕಿರುಕುಳ ಆರೋಪ: ಕಾಮುಕರಿಗೆ ಹಿಗ್ಗಾಮುಗ್ಗಾ ಥಳಿತ