ಕಲಬುರಗಿ: ಎಪಿಎಂಸಿ ಕಾಯ್ದೆ, ಭೂ ಸುಧಾರಣಾ ವಿರೋಧಿ ಕಾಯ್ದೆ, ವಿದ್ಯುತ್ ಖಾಸಗೀಕರಣ ವಿರೋಧಿಸಿ ರೈತ ಸಂಘಟನೆಗಳಿಂದ ಕರೆ ನೀಡಲಾಗಿರುವ ಕರ್ನಾಟಕ ಬಂದ್ಗೆ ಕಲಬುರಗಿಯಲ್ಲಿ ರೈತಪರ ಸಂಘಟನೆಗಳು ಬೆಂಬಲ ಸೂಚಿಸಿವೆ.
ಸೆಪ್ಟೆಂಬರ್ 28 ಕರ್ನಾಟಕ ಬಂದ್ಗೆ ರೈತ ಸಂಘಟನೆಗಳು ಮುಂದಾಗಿದ್ದು, ಕಲಬುರಗಿಯಲ್ಲಿ ಅಖಿಲ ಭಾರತ ರೈತ ಸಂಘರ್ಷ ಸಮನ್ವಯ ಸಮಿತಿ ನೇತೃತ್ವದಲ್ಲಿ ರೈತ ಸಂಘಟನೆಗಳಾದ ಕರ್ನಾಟಕ ಪ್ರಾಂತ ರೈತ ಸಂಘ, ಅಖಿಲ ಭಾರತ ಕಿಸಾನ ಸಭಾ, ರೈತ ಕೃಷಿ ಕಾರ್ಮಿಕರ ಸಂಘ ಸೇರಿದಂತೆ 30ಕ್ಕೂ ಹೆಚ್ಚು ರೈತ ಸಂಘಟನೆ ಹಾಗೂ ಕನ್ನಡ ಪರ ಸಂಘಟನೆಗಳು ಬಂದ್ಗೆ ಬೆಂಬಲ ನೀಡಲಿವೆ.
ಈ ಕುರಿತು ಈಟಿವಿ ಭಾರತದೊಂದಿಗೆ ಮಾತನಾಡಿದ ಆಯಾ ರೈತ ಸಂಘಟನೆಯ ಜಿಲ್ಲಾಧ್ಯಕ್ಷರು ಹಾಗೂ ಮುಖಂಡರು ಬಂದ್ಗೆ ಸಂಪೂರ್ಣ ಬೆಂಬಲ ನೀಡುವುದಾಗಿ ತಿಳಿಸಿದ್ದಾರೆ. ಕೆಲ ಕನ್ನಡ ಪರ ಸಂಘಟನೆಗಳಿಂದಲೂ ಬೆಂಬಲ ವ್ಯಕ್ತವಾಗಿದೆ. ಇನ್ನೂ ಬಂದ್ನ ಭಾಗವಾಗಿ ನಾಳೆ ನಗರದಲ್ಲಿ ಧರಣಿ ಸತ್ಯಾಗ್ರಹ ಹಮ್ಮಿಕೊಂಡಿರುವುದಾಗಿ ರೈತ ಹೋರಾಟಗಾರ ಶರಣಬಸಪ್ಪ ಮಮಶೆಟ್ಟಿ ತಿಳಿಸಿದ್ದಾರೆ.