ಕಲಬುರಗಿ : ಜಿಲ್ಲೆಯ ಪೊಲೀಸರು ಭರ್ಜರಿ ಕಾರ್ಯಾಚರಣೆ ಮಾಡಿದ್ದಾರೆ. ಅಂದಾಜು 50 ಲಕ್ಷ ಮೌಲ್ಯದ 340 ಕೆಜಿ ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಕಲಬುರಗಿ ಹೊರವಲಯದ ತಾವರಗೇರಾ ಕ್ರಾಸ್ ಬಳಿ ಪೊಲೀಸರು ವಾಹನಗಳನ್ನು ತಪಾಸಣೆ ಮಾಡುವಾಗ ಅವರನ್ನು ಕಂಡು ಟಾಟಾ ಏಸ್ ಗೂಡ್ಸ್ ವಾಹನ ಅತಿ ವೇಗವಾಗಿ ತೆರಳಿದೆ.
ಇದರಿಂದ ಅನುಮಾನಗೊಂಡ ಪೊಲೀಸರು ಬೆನ್ನಟ್ಟಿ ಉಪಳಾಂವ ಕ್ರಾಸ್ ಬಳಿ ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ವಾಹನದಲ್ಲಿ ಗಾಂಜಾ ಇರುವುದು ಪತ್ತೆಯಾಗಿದೆ.
ವಾಹನದಲ್ಲಿ ಗಾಂಜಾ ಸಾಗಿಸಲು ಪ್ರತ್ಯೇಕ ವ್ಯವಸ್ಥೆ ಮಾಡಿಕೊಳ್ಳಲಾಗಿತ್ತು. ಅಲ್ಲಿದ್ದ 340 ಕೆಜಿ ತೂಗುವ 170 ಪೊಟ್ಟಣಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ವೇಳೆ ಓರ್ವ ಪರಾರಿಯಾಗಿದ್ದು, ಮೂರು ಜನರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಲಾತೂರ್ ಮೂಲದ ಅಕ್ರಂ ಇಮಾನದಾರ್ (22), ಸುಮೇರ್ ಇನಾಮದಾರ್ (21) ಹಾಗೂ ಬೀದರ್ ಮೂಲದ ಮೋಹನ ಮೇತ್ರೆ (32) ಎಂಬ ಮೂವರು ಬಂಧಿತ ಆರೋಪಿಗಳು.
ಇವರು ಮಹಾರಾಷ್ಟ್ರ ಹಾಗೂ ತೆಲಂಗಾಣದಿಂದ ಕರ್ನಾಟಕಕ್ಕೆ ಗಾಂಜಾ ಸಾಗಾಟ ಮಾಡುತ್ತಿರುವ ಬಗ್ಗೆ ಶಂಕೆ ವ್ಯಕ್ತಪಡಿಸಲಾಗಿದೆ. ಈ ಕುರಿತು ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.