ಸೇಡಂ: ನಗರದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿ ವ್ಯಾಪಾರ ಮಾಡುತ್ತಿದ್ದ ವ್ಯಾಪಾರಿಗಳಿಗೆ ಹಾಗೂ ಜನರಿಗೆ ತಹಶೀಲ್ದಾರ್ ಲಾಠಿ ರುಚಿ ತೋರಿಸಿದ ಪ್ರಸಂಗ ನಡೆಯಿತು.
ಕೋವಿಡ್ ಗೆ ಕ್ಯಾರೆ ಎನ್ನದ ಜನ ಶುಕ್ರವಾರ ಮಾರುಕಟ್ಟೆಯಲ್ಲಿ ತುಂಬಿ ತುಳುಕುತ್ತಿದ್ದರು. ಬಂದ್ ಮಾಡುವಂತೆ ಸೂಚಿಸಿದ್ದರೂ ಬಟ್ಟೆ, ಜ್ಯೂವೆಲರ್ಸ್, ಪ್ಲಾಸ್ಟಿಕ್, ಟಿವಿ ಶೋರೂಮ್, ಫರ್ನಿಚರ್, ಹಾರ್ಡವೇರ್, ಜನರಲ್ ಸ್ಟೋರ್ ಗಳು ಕಾರ್ಯನಿರ್ವಹಿಸುತ್ತಿದ್ದವು.
ಇದರಿಂದ ಅಧಿಕಾರಿಗಳಿಗೆ ತಲೆನೋವಾಗಿ ಪರಿಣಮಿಸಿತ್ತು. ಮೊದಲಿಗೆ ರಸ್ತೆಗಿಳಿದ ಸಹಾಯಕ ಆಯುಕ್ತರಾದ ರಮೇಶ ಕೋಲಾರ ಅವರು ಪರಿಸ್ಥಿತಿ ಅವಲೋಕಿಸಿ, ರಸ್ತೆಯಲ್ಲೇ ಪೊಲೀಸರೊಂದಿಗೆ ಚರ್ಚೆ ನಡೆಸಿ ಕ್ರಮ ಜರುಗಿಸುವಂತೆ ಆದೇಶಿಸಿದರು.
ಲಾಠಿ ಹಿಡಿದ ತಹಶೀಲ್ದಾರ್: ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರ ಲಾಠಿ ಹಿಡಿದು ಅನಾವಶ್ಯಕವಾಗಿ ತಿರುಗಾಡುವವರಿಗೆ ಛಳಿ ಬಿಡಿಸಿದರು. ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿ ವ್ಯಾಪಾರ ನಡೆಸುತ್ತಿದ್ದ ಜ್ಯೂವೆಲರಿ ಮತ್ತು ಬಟ್ಟೆ ಅಂಗಡಿಗಳಿಗೆ ಬೀಗ್ ಜಡಿದು, ಜಪ್ತಿ ಮಾಡುವಂತೆ ಅಲ್ಲೇ ಇದ್ದ ಪುರಸಭೆ ಮುಖ್ಯಾಧಿಕಾರಿ ಸತೀಶ ಗುಡ್ಡೆ ಅವರಿಗೆ ಸೂಚಿಸಿದರು.
ಇನ್ನು ಪಿಎಸ್ಐ ನಾನಾಗೌಡ, ಅಪರಾಧ ವಿಭಾಗ ಪಿಎಸ್ಐ ಅಯ್ಯಪ್ಪ ಭೀಮಾವರಂ ಅವರು ಪ್ರಮುಖ ಮಾರುಕಟ್ಟೆಯಲ್ಲಿ ಸಂಚರಿಸಿ, ಸರ್ಕಾರದ ಆದೇಶ ಪಾಲಿಸದ ಅಂಗಡಿಗಳಿಗೆ ಬಿಸಿ ಮುಟ್ಟಿಸಿದರು.