ಕಲಬುರಗಿ: ಮಕ್ಕಳ ಕಳ್ಳರ ವದಂತಿಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಈ ಪ್ರಕರಣ. ಸಂಬಂಧಿಕರ ಮನೆಗೆಂದು ಆಗಮಿಸಿದ ಇಬ್ಬರು ಮಹಿಳೆಯರನ್ನು ಮಕ್ಕಳ ಕಳ್ಳರು ಎಂದು ತಪ್ಪಾಗಿ ಭಾವಿಸಿದ ಗ್ರಾಮಸ್ಥರು ಮನಬಂದಂತೆ ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಚಿಂಚೋಳಿ ತಾಲೂಕಿನ ಪೋಲಕಪಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ತೆಲಂಗಾಣದ ಕೋತ್ಲಾಪುರ ಗ್ರಾಮದ ನಿವಾಸಿಗಳಾದ ಲಕ್ಷ್ಮಮ್ಮ ಹಾಗೂ ಬಾಲಮಣಿ ಗ್ರಾಮಸ್ಥರ ಕೈಯಲ್ಲಿ ಥಳಿಸಿಕೊಂಡ ಮಹಿಳೆಯರು. ಶುಕ್ರವಾರ ಮಧ್ಯಾಹ್ನದ ವೇಳೆ ಕೋತ್ಲಾಪುರದಿಂದ ಪೋಲಕಪಳ್ಳಿ ಗ್ರಾಮಕ್ಕೆ ಆಗಮಿಸಿದ ಮಹಿಳೆಯರು ತಮ್ಮ ಸಂಬಂಧಿ ಮನೆಗೆ ತೆರಳಿದ್ದಾರೆ. ಆದರೆ ಮನೆಯವರು ಕೀಲಿ ಹಾಕಿಕೊಂಡು ಹೋಲಕ್ಕೆ ಹೋಗಿದ್ದರು. ಹೀಗಾಗಿ ಅವರ ಬರುವಿಕೆಯ ದಾರಿ ಕಾಯುತ್ತ ಮನೆಯ ಮುಂದೆ ಇಬ್ಬರು ನಿಂತಿದ್ದರು.
ಮಹಿಳೆಯರು ನಿಂತಿರುವುದನ್ನು ಗಮನಿಸಿದ ಗ್ರಾಮಸ್ಥರು ಅನುಮಾನದಿಂದ ನೋಡಿದ್ದಾರೆ. ಗ್ರಾಮದ ತುಂಬೆಲ್ಲಾ ಕಾಡ್ಗಿಚ್ಚಿನಂತೆ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹರಡಿದೆ. ಗುಂಪು ಗುಂಪಾಗಿ ಆಗಮಿಸಿದ ಗ್ರಾಮಸ್ಥರು ಅಪರಿಚಿತ ಮಹಿಳೆಯರನ್ನು ವಿಚಾರಿಸಿದ್ದಾರೆ. ದುರಾದೃಷ್ಟ ಎಂಬಂತೆ ಅವರು ತೆಲಗು ಭಾಷಿಕರಾದ ಕಾರಣ ಸರಿಯಾಗಿ ಉತ್ತರ ನೀಡಲಾಗದೆ ತಡಬಡಾಯಿಸಿದ್ದಾರೆ.
ಇದರಿಂದ ಮಕ್ಕಳ ಕಳ್ಳರು ಇರಬಹುದು ಎಂದು ತಪ್ಪಾಗಿ ಭಾವಿಸಿದ ಜನರು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ತಾವು ಮಕ್ಕಳ ಕಳ್ಳರು ಅಲ್ಲ ಎಂದು ಎಷ್ಟೇ ಗೋಗರೆದರೂ ಬಿಡದೆ ಮನಬಂದಂತೆ ಥಳಿಸಿ ಚಿಂಚೋಳಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಸಂಜೆ ಹೊಲದಿಂದ ಆಗಮಿಸಿದ ಸಂಬಂಧಿಕರಿಗೆ ಈ ವಿಷಯ ಗೊತ್ತಾಗಿದೆ. ಬಳಿಕ ಅವರು ಪೊಲೀಸ್ ಠಾಣೆಗೆ ಹೋಗಿ ಇಬ್ಬರನ್ನು ಕರೆದುಕೊಂಡು ಬಂದಿದ್ದಾರೆ.
ಇದನ್ನೂ ಓದಿ: ಮಕ್ಕಳ ಕಳ್ಳರ ವದಂತಿ.. ಪೊಲೀಸರಿಗೆ ನಾಲ್ವರನ್ನು ಹಿಡಿದುಕೊಟ್ಟ ವಿಜಯಪುರ ಜನತೆ