ಕಲಬುರಗಿ: ಕಳೆದ ಸೋಮವಾರ ನಡೆದ ರೌಡಿ ಶೀಟರ್ವೋರ್ವನ ಕೊಲೆ ಬೆನ್ನಲ್ಲೇ ಈತನ ಬೆಂಬಲಿಗರು ಏರಿಯಾವೊಂದಕ್ಕೆ ನುಗ್ಗಿ ಕಂಡ ಕಂಡವರ ಮೇಲೆ ಹಲ್ಲೆ ಮಾಡಿ ಧಾಂದಲೆ ನಡೆಸಿದ ಘಟನೆ, ಇಲ್ಲಿನ ಸುಂದರ್ ನಗರ ಬಡಾವಣೆಯಲ್ಲಿ ನಡೆದಿದೆ.
ನಗರದ ಮಾಂಗರವಾಡಿಯ ರೌಡಿಶೀಟರ್ ವೀರತಾ ಉಪಾಧ್ಯ ಸೋಮವಾರ ಸಂಜೆ ತನ್ನ ತಂದೆಯೊಂದಿಗೆ ಬೈಕ್‌ನಲ್ಲಿ ಸಂಬಂಧಿಕರ ಮನೆಗೆ ಹೊರಟಿದ್ದ. ಈ ವೇಳೆ ಇಲ್ಲಿನ ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿ ವೀರತಾ ಉಪಾಧ್ಯನ ಮೇಲೆ ಏಕಾಏಕಿ ಹಲ್ಲೆ ಮಾಡಿ, ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಮಾರಕಾಸ್ತ್ರಗಳಿಂದ ಕೊಚ್ಚಿ ದುಷ್ಕರ್ಮಿಗಳು ಕೊಲೆ ಮಾಡಿದ್ದಾರೆ.
ಈ ವಿಚಾರ ಗೊತ್ತಾಗ್ತಿದ್ದಂತೆ ರೊಚ್ಚಿಗೆದ್ದ ಆತನ ಬೆಂಬಲಿಗರು ಸರ್ಕಾರಿ ಆಸ್ಪತ್ರೆಯ ಮುಂಭಾಗದಲ್ಲಿರುವ ಸುಂದರ್ ನಗರಕ್ಕೆ ನುಗ್ಗಿದ್ದಾರೆ. ಬಳಿಕ ಏರಿಯಾದಲ್ಲಿ ರಸ್ತೆ ಬದಿ ನಿಲ್ಲಿಸಿರುವ ನೂರಕ್ಕೂ ಅಧಿಕ ಬೈಕ್‌ಗಳು, ನಾಲ್ಕೈದು ಕಾರುಗಳು ಜಖಂ ಮಾಡಿದ್ದಾರೆ. ಏರಿಯಾದಲ್ಲಿನ ಪ್ರತಿಯೊಂದು ಮನೆಗೆ ನುಗ್ಗಿ ಮಹಿಳೆಯರು, ಮಕ್ಕಳು, ವೃದ್ಧರೆನ್ನದೆ ಅವರ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗ್ತಿದೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಡಿಸಿಪಿ ಕಿಶೋರ್ ಬಾಬು, ವೀರತಾ ಉಪಾಧ್ಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಲಾಲ್ಯ ಅಲಿಯಾಸ್ ಪ್ರಸಾದ್, ವಿಶಾಲ್ ನವರಂಗ್, ಸತೀಶ್ ಕುಮಾರ್ ಅಲಿಯಾಸ್ ಗುಂಡು ಫರ್ತಾಬಾದ್, ಬಾಂಬೆ ಸಂಜ್ಯಾ ಮತ್ತು ತೌಸಿಫ್ ಸೇರಿದಂತೆ ಐವರ ವಿರುದ್ಧ ಬ್ರಹ್ಮಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶೀಘ್ರವೇ ಆರೋಪಿಗಳನ್ನು ಬಂಧಿಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ.. ಗುರುನಾನಕ್ ಭವನದ ವಿಶೇಷ ಕೋರ್ಟ್ ಹಾಲ್ನಲ್ಲಿ 'ಸಿಡಿ'ದ ಯುವತಿ ಹಾಜರು