ಕಲಬುರಗಿ : ಕುಖ್ಯಾತ ರೌಡಿಶೀಟರ್ ಮಾರ್ಕೇಟ್ ಸತ್ಯಾ ಅಲಿಯಾಸ್ ಸತೀಶ್ ರೆಡ್ಡಿಯನ್ನು ಕಲಬುರಗಿ ಪೊಲೀಸರು ಹೈದರಾಬಾದ್ನಲ್ಲಿ ಬಂಧಿಸಿದ್ದಾರೆ. ಇತ್ತೀಚೆಗೆ ನಗರದಲ್ಲಿ ನಡೆದಿದ್ದ ಎರಡು ದರೋಡೆ ಯತ್ನ ಪ್ರಕರಣಗಳ ಹಿಂದೆ ಸತ್ಯಾ ಕೈವಾಡ ಇದೆ ಎಂಬ ಆರೋಪದ ಹಿನ್ನೆಲೆ ಬಂಧನವಾಗಿದೆ.
ಬೇರೆ ಪ್ರಕರಣಗಳಲ್ಲಿ ನ್ಯಾಯಾಲಯದಿಂದ ಜಾಮೀನು ಪಡೆದ ಬಳಿಕ ಸತ್ಯಾ ತಲೆಮರೆಸಿಕೊಂಡಿದ್ದ. ಈ ಮುಂಚೆಯೂ ಹಲವು ಕಡೆ ದರೋಡೆ, ಕೊಲೆ ಯತ್ನ, ಸುಲಿಗೆ, ಅಕ್ರಮ ಶಸ್ತ್ರಾಸ್ತ್ರ ಮಾರಾಟ ಸೇರಿದಂತೆ ಇತರೆ ಪ್ರಕರಣಗಳಲ್ಲಿ ಶಾಮೀಲಾದ ಆರೋಪ ಹೊತ್ತು ಜೈಲಿಗೂ ಹೋಗಿ ಬಂದಿದ್ದ. ಇದೀಗ ಮತ್ತೆ ಪೊಲೀಸರ ಕೈಗೆ ರೌಡಿಶೀಟರ್ ಸತ್ಯಾ ಸಿಕ್ಕಿಬಿದ್ದಿದ್ದಾನೆ.
ಮೊನ್ನೆಯಷ್ಟೇ ಸಾಮಾಜಿಕ ಜಾಲತಾಣದಲ್ಲಿ, ನಾನು ಅಪರಾಧ ಲೋಕದಿಂದ ದೂರ ಬಂದಿದ್ದೇನೆ ಎಂದಿದ್ದ. ಕುಟುಂಬದ ಸದಸ್ಯರೊಂದಿಗೆ ಹೈದರಾಬಾದ್ನಲ್ಲಿ ನೆಲೆಸಿದ್ದೇನೆ. ನನ್ನ ಹೆಸರು ಹೇಳಿ ಯಾರಾದ್ರೂ ಅಪರಾಧ ಕೃತ್ಯ ಎಸಗಿದರೆ ಪೊಲೀಸರಿಗ ಮಾಹಿತಿ ನೀಡಿ. ನನ್ನ ಹೆಸರು ಹೇಳಿ ನಡೆಸಿದ ಅಪರಾಧ ಕೃತ್ಯಗಳಿಗೆ ನಾನು ಹೊಣೆಗಾರನಲ್ಲ ಎಂದಿದ್ದ. ಆದರೆ, ಈಗ ಸತ್ಯಾನನ್ನ ಪೊಲೀಸರು ಬಂಧಿಸಿದ್ದಾರೆ.