ಕಲಬುರಗಿ: ವ್ಯಕ್ತಿಯೋರ್ವ ಮಹಿಳೆಯರ ವಾರ್ಡ್ಗೆ ನುಗ್ಗಿ ಚಿಕಿತ್ಸೆ ಪಡೆಯುತ್ತಿರುವ ಮಹಿಳಾ ರೋಗಿ ಮೇಲೆ ಅತ್ಯಾಚಾರ ಎಸಗಿರುವ ಘಟನೆ ಶುಕ್ರವಾರ ತಡರಾತ್ರಿ ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ನಡೆದಿದೆ. ಸಾರ್ವಜನಿಕರೇ ಅತ್ಯಾಚಾರ ಆರೋಪಿಯನ್ನು ರೆಡ್ ಹ್ಯಾಂಡ್ ಆಗಿ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಕಲಬುರಗಿಯ ನಿವಾಸಿ ಮೆಹಬೂಬ್ ಪಾಷಾ ಎಂಬಾತನೆ ಅತ್ಯಾಚಾರ ಎಸಗಿರುವ ಆರೋಪಿ. ಆರೋಪಿಯು ನಿನ್ನೆ ರಾತ್ರಿ ಕಲಬುರಗಿ ನಗರದ ಜಿಮ್ಸ್ ಆಸ್ಪತ್ರೆಗೆ ತೆರಳಿದ್ದ. ರಾತ್ರಿಯೆಲ್ಲ ಆಸ್ಪತ್ರೆಯಲ್ಲಿ ಓಡಾಡಿದ ಬಳಿಕ ಮಹಿಳೆಯರ ವಾರ್ಡ್ಗೆ ನುಗ್ಗಿದ್ದಾನೆ. ಬಳಿಕ ಅಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 36 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಆರೋಪಿಯು ಅತ್ಯಾಚಾರ ಎಸಗುತ್ತಿರುವುದನ್ನು ಪಕ್ಕದ ಪುರುಷ ವಾರ್ಡ್ನ ರೋಗಿಯ ಕಡೆಯ ವ್ಯಕ್ತಿಯೊಬ್ಬ ಕಂಡು, ತಕ್ಷಣ ಕೃತ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದು, ಬಳಿಕ ಆರೋಪಿಯನ್ನು ಹಿಡಿದುಕೊಂಡು ಬಂದಿದ್ದಾನೆ. ಹಿಡಿದು ತರುವಾಗ ಆರೋಪಿಯು ಗಲಾಟೆ ಮಾಡಿದ್ದಾನೆ. ಆಗ ಆಸ್ಪತ್ರೆಯಲ್ಲಿದ್ದ ಸಿಬ್ಬಂದಿ ಬಂದು ವಿಚಾರಿಸಿದಾಗ ವ್ಯಕ್ತಿಯು ಆರೋಪಿ ಎಸಗಿದ ಕೃತ್ಯದ ಬಗ್ಗೆ ಮೊಬೈಲ್ನಲ್ಲಿನ ವಿಡಿಯೋ ತೋರಿಸಿದ್ದಾನೆ. ಬಳಿಕ ಆಸ್ಪತ್ರೆ ಸಿಬ್ಬಂದಿ ಬ್ರಹ್ಮಪುರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಆರೋಪಿ ಮೆಹಬೂಬ್ ಪಾಷಾನನ್ನು ವಶಕ್ಕೆ ಪಡೆದು, ವಿಚಾರಣೆಗೆ ಕರೆದೊಯ್ದಿದ್ದಾರೆ.
ಅತ್ಯಾಚಾರಕ್ಕೆ ಒಳಗಾದ ಮಹಿಳೆಯು ಕಳೆದ ಏಳು ತಿಂಗಳಿನಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಸದ್ಯ ಆರೋಪಿಯನ್ನು ಬಂಧಿಸಿ, ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು, ಆತನ ಹಿನ್ನೆಲೆ ಬಗ್ಗೆ ಮಾಹಿತಿ ಕಲೆ ಹಾಕುತ್ತಿದ್ದಾರೆ. ಆರೋಪಿಯು ಆಸ್ಪತ್ರೆಗೆ ಬರಲು ಕಾರಣವೇನು? ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಕಲಬುರಗಿ ನಗರ ಪೊಲೀಸ್ ಆಯುಕ್ತ ಚೇತನ್ ಆರ್., 'ಘಟನೆ ಕುರಿತಂತೆ ಜಿಮ್ಸ್ ಆಸ್ಪತ್ರೆಯ ನರ್ಸ್ ನೀಡಿದ ದೂರಿನಂತೆ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಿಮ್ಸ್ನಲ್ಲಿನ ಭದ್ರತೆಯ ಬಗ್ಗೆ ಸ್ಥಳಕ್ಕೆ ತೆರಳಿ ಸಂಬಂಧಿಸಿದವರನ್ನು ವಿಚಾರಣೆ ಮಾಡಲಾಗಿದೆ. ಆರೋಪಿಯು ಆಸ್ಪತ್ರೆಯಲ್ಲಿ ದಾಖಲಾಗಿರಲಿಲ್ಲ. ನಿನ್ನೆ ತಾನೆ ಆಸ್ಪತ್ರೆಗೆ ಬಂದಿರುವ ಸಾಧ್ಯತೆ ಇದೆ. ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ವ್ಯಕ್ತಿ ಕೊಲೆಗೈದು ದೇಹ ತುಂಡು ತುಂಡಾಗಿ ಕತ್ತರಿಸಿದ್ದ ಪ್ರಕರಣ 8 ವರ್ಷದ ಬಳಿಕ ಆರೋಪಿಗಳ ಬಂಧನ