ಕಲಬುರಗಿ: ಎಂಟು ವರ್ಷದ ಬಾಲಕಿ ಮೇಲೆ ಅತ್ಯಾಚಾರಗೈದು ಮಾಡಿದ್ದ ವಿಕೃತ ಕಾಮುಕನಿಗೆ ಗಲ್ಲು ಶಿಕ್ಷೆ ವಿಧಿಸಿ ಜಿಲ್ಲಾ ಪೋಕ್ಸೋ ನ್ಯಾಯಾಲಯ ಮಹತ್ವದ ಆದೇಶ ಹೊರಡಿಸಿದೆ.
ಚಿಂಚೋಳಿ ತಾಲೂಕಿನ ಯಾಕಾಪೂರ ಗ್ರಾಮದ 35 ವರ್ಷದ ಯಲ್ಲಪ್ಪ ಮರಣದಂಡನೆಗೆ ಗುರಿಯಾಗಿರುವ ಅಪರಾಧಿ. ಕಳೆದ ವರ್ಷದ ಡಿಸೆಂಬರ್ 3 ರಂದು ಯಾಕಾಪೂರ ಗ್ರಾಮದಲ್ಲಿ ಚಾಕೊಲೇಟ್ ಆಮಿಷ ತೋರಿಸಿ ಬಾಲಕಿಯನ್ನು ಕರೆದೊಯ್ದು ಅತ್ಯಾಚಾರಗೈದಿದ್ದ ವಿಕೃತ ಕಾಮಿ ಬಳಿಕ ಆಕೆಯನ್ನು ಬರ್ಬರವಾಗಿ ಕೊಲೆ ಮಾಡಿದ್ದ.
ಸುಲೇಪೇಟ ಪೊಲೀಸ್ ಠಾಣಾ ಪೊಲೀಸರು ತನಿಖೆ ನಡೆಸಿ ಆರೋಪಿ ವಿರುದ್ಧ ದೋಷಾರೋಪ ಪಟ್ಟಿಯನ್ನ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಜಿಲ್ಲಾ ಪೋಕ್ಸೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎನ್. ಗೋಪಾಲಪ್ಪ ಅವರು ಕಾಮುಕನಿಗೆ ಗಲ್ಲು ಶಿಕ್ಷೆಯ ಆದೇಶ ನೀಡಿದ್ದಾರೆ. ಘಟನೆ ನಡೆದ ಮೂರು ತಿಂಗಳಲ್ಲಿಯೇ ಆರೋಪಿಗೆ ಗಲ್ಲು ಶಿಕ್ಷೆಯಾಗಿರುವುದು ಮಗಳ ಸಾವಿನ ನ್ಯಾಯದ ನಿರೀಕ್ಷೆಯಲ್ಲಿದ್ದ ಬಾಲಕಿಯ ಕುಟುಂಬಸ್ಥರಿಗೆ ಶೀಘ್ರವೇ ನ್ಯಾಯ ಸಿಕ್ಕಂತಾಗಿದೆ.