ಸೇಡಂ: ಗ್ರಾಮೀಣ ಭಾಗದಲ್ಲಿರುವ ಸಮಸ್ಯೆಗಳನ್ನು ಪರಿಶೀಲಿಸಿ ಸಾಧ್ಯವಾದಷ್ಟು ಸ್ಥಳದಲ್ಲಿಯೇ ಪರಿಹರಿಸುವಂತಾಗಲು ಮತ್ತು ಸರಕಾರಿ ಯೋಜನೆಗಳನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ಉದ್ದೇಶದಿಂದ ಜನ ಸ್ಪಂದನ ಕಾರ್ಯಕ್ರಮ ಆರಂಭಿಸಲಾಗಿದೆ ಎಂದು ಶಾಸಕ ರಾಜಕುಮಾರ ಪಾಟೀಲ ತೇಲ್ಕೂರ ಹೇಳಿದರು.
ತಾಲೂಕಿನ ಮುಧೋಳ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ಪರಿಸರದಲ್ಲಿ ಆಯೋಜಿಸಿದ ಜನಸ್ಪಂದನ ಹಾಗೂ ಸರಕಾರಿ ಯೋಜನೆಗಳು ಮನೆ ಬಾಗಿಲಿಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸರಕಾರದ ವಿವಿಧ ಯೋಜನೆಗಳಿಗಾಗಿ ಸಾರ್ವಜನಿಕರು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ಹಾಗೂ ಒಂದೇ ಸೂರಿನಡಿ ಎಲ್ಲಾ ಯೋಜನೆಗಳು ಸಿಗುವಂತೆ ಮಾಡುವ ಉದ್ದೇಶದಿಂದ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಭಾಗ್ಯಲಕ್ಷ್ಮಿ ರಿಯಾಯಿತಿಯಲ್ಲಿ ಕೃಷಿ ಪರಿಕರಗಳ ಖರೀದಿ, 44 ಜನರಿಗೆ ಪೌತಿ ವಾರಸಾ, 6 ವಿಧವಾ ವೇತನ, 3 ಮನಸ್ವಿನಿ, 6 ರಾಷ್ಟ್ರೀಯ ಕುಟುಂಬ ಯೋಜನೆ, 6 ಪಹಣಿ ತಿದ್ದುಪಡಿ, 14 ವೃದ್ಧಾಪ್ಯ ವೇತನ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ನೀಡಲಾಯಿತು.
ಮುಧೋಳ ಗ್ರಾಮ ಹಾಗೂ ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಅಭಿವೃದ್ದಿಗೆ 50 ಕೋಟಿ ಅನುದಾನದಲ್ಲಿ ಅನೇಕ ಕಾಮಗಾರಿಗಳನ್ನು ಕೈಗೊಂಡಿದ್ದು, ಮುಧೋಳ ಗ್ರಾ.ಪಂ ವ್ಯಾಪ್ತಿಯ ಹಳ್ಳಿಗಳ ಅಭಿವೃದ್ಧಿಗೆ ಇನ್ನೂ ಮೂರು ಕೋಟಿ ಅನುದಾನ ನೀಡಲಾಗುವುದು ಎಂದರು.