ಕಲಬುರಗಿ: ಅಡುಗೆಯಲ್ಲಿ ಹಲ್ಲಿ ಹಾಕಿದ್ದೀರಿ ಎಂದು ತಕರಾರರು ತೆಗೆದು ಕ್ವಾರಂಟೈನ್ ಕೇಂದ್ರದ ಅಧಿಕಾರಿ ಮತ್ತು ಸಿಬ್ಬಂದಿ ಮೇಲೆ ಕಾರ್ಮಿಕರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಜಿಲ್ಲೆಯ ಕಾಳಗಿ ತಾಲೂಕಿನ ಕೋರವಾರ ಜವಾಹರ ನವೋದಯ ವಿದ್ಯಾಲಯದಲ್ಲಿ ತೆರೆಯಲಾದ ಕೋವಿಡ್-19 ಕ್ವಾರಂಟೈನ್ ಕೇಂದ್ರದಲ್ಲಿ, ಮಂಗಳವಾರ ಬೆಳಗ್ಗಿನ ಉಪಾಹಾರದಲ್ಲಿ ಸತ್ತ ಹಲ್ಲಿ ಬಿದ್ದಿದೆ ಎಂದು ಆರೋಪಿಸಿ ಅಡುಗೆ ಸಿಬ್ಬಂದಿ, ಓರ್ವ ಪಿಡಿಒ ಹಾಗೂ ಪಂಚಾಯಿತಿ ಸಿಬ್ಬಂದಿ ಮೇಲೆ ವಲಸೆ ಕಾರ್ಮಿಕರು ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ.
ಏನಿದು ಘಟನೆ?
ಮಹಾರಾಷ್ಟ್ರದಿಂದ ಆಗಮಿಸಿದ 562 ವಲಸೆ ಕಾರ್ಮಿಕರನ್ನು ನವೋದಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿದೆ. ಮಂಗಳವಾರ ಬೆಳಗ್ಗೆ ಅವಲಕ್ಕಿ ತಯಾರಿಸಲಾಗಿತ್ತು. ಇದರಲ್ಲಿ ಸತ್ತ ಹಲ್ಲಿ ಬಿದ್ದಿದೆ ಎಂದು ಗಲಾಟೆ ತೆಗೆದ ಕಾರ್ಮಿಕರು, ಬಿಸಿಯೂಟದ ಮಹಿಳಾ ಸಿಬ್ಬಂದಿಯ ಅಡುಗೆ ಕೋಣೆಗೆ ನುಗ್ಗಿದ್ದಾರೆ ಎನ್ನಲಾಗುತ್ತಿದೆ.
ಒಳಗಿದ್ದ ದಿನಸಿ ವಸ್ತು, ತರಕಾರಿ, ಸೌದೆ, ಪಾತ್ರಗಳನ್ನು ಎಸೆದಿದ್ದಾರೆ. ಇದರಿಂದ ಗಾಬರಿಗೊಂಡ ಸಿಬ್ಬಂದಿ ಪಕ್ಕದ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದಾರೆ. ಪಿಡಿಒ ಹಾಗೂ ಗ್ರಾಮ ಪಂಚಾಯಿತಿ ಸಿಬ್ಬಂದಿ ಮಧ್ಯೆ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದಾಗ, ಅವರ ಮೇಲೂ ಮುಗಿಬಿದ್ದು ಹಲ್ಲೆ ಮಾಡಿದ್ದಾರೆ ಎಂಬ ಆರೋಪವಿದೆ.
ಹಲ್ಲಿ ಬಿದ್ದದ್ದು ಸುಳ್ಳು:
ಉಪಹಾರದಲ್ಲಿ ಹಲ್ಲಿ ಬಿದ್ದದ್ದು ಸುಳ್ಳು ಆರೋಪ, ಅದೆ ಆಹಾರ ನಾವು ಸೇವಿಸಿದ್ದೇವೆ ನಮಗೆ ಏನು ಆಗಿಲ್ಲ, ಅದೇ ಆಹಾರ ಸೇವಿಸಿದ ಕ್ವಾರಂಟೈನ್ ನಿವಾಸಿಗಳ ಆರೋಗ್ಯದಲ್ಲಿಯೂ ಏರುಪೇರಾಗಿಲ್ಲ, ಸುಖಾ ಸುಮ್ಮನೆ ಸತ್ತಿರುವ ಹಲ್ಲಿ ಪ್ಲೇಟ್ನಲ್ಲಿ ಹಾಕಿ ಜಗಳ ತೆಗೆದು ಹಲ್ಲೆ ಮಾಡಲಾಗಿದೆ ಅನ್ನೋದು ಅಲ್ಲಿನ ಸಿಬ್ಬಂದಿ ವಾದ.
ಕ್ವಾರಂಟೈನ್ನಲ್ಲಿ ಎರಡು ಕೇಂದ್ರ ತೆರೆಯಲಾಗಿದ್ದು, ಅಲ್ಲಿನ ಪಾತ್ರೆಗಳು ಬಳಸಬಾರದು, ನಮಗೆ ಬೇಕಾದಾಗ ಹೊರಗೆ ಹೊಗಲು ಬಿಡಬೇಕು ಎಂದು ಕೆಲವರು ಖ್ಯಾತೆ ತೆಗೆಯುತ್ತಿದ್ದಾರಂತೆ. ಇದಕ್ಕೆ ಒಪ್ಪದಿದ್ದಾಗ ಸತ್ತ ಹಲ್ಲಿ ತಂದು ಪ್ಲೇಟ್ನಲ್ಲಿ ಹಾಕಿ ಜಗಳ ತೆಗೆದಿದ್ದಾರೆ ಎಂದು ಸಿಬ್ಬಂದಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಘಟನೆಯಿಂದ ಭಯಭೀತರಾದ ಸಿಬ್ಬಂದಿ ನಮ್ಮನ್ನು ಸೇವೆಯಿಂದ ತೆಗೆದರೂ ಪರವಾಗಿಲ್ಲ ಆದರೆ ಇಲ್ಲಿ ಕರ್ತವ್ಯ ನಿರ್ವಹಿಸುವುದಿಲ್ಲ ನಮ್ಮನ್ನು ಬಿಡುಗಡೆಗೊಳಿಸಿ ಎಂದು ಪಟ್ಟು ಹಿಡಿದಿದ್ದಾರೆ.
ಶಾಸಕ ಡಾ. ಅವಿನಾಶ ಜಾಧವ್, ತಹಶೀಲ್ದಾರ್, ಸೆಕ್ಟರ್ ಮೆಜಿಸ್ಟ್ರೆಟ್, ಸಿಪಿಐ ಸ್ಥಳಕ್ಕೆ ಆಗಮಿಸಿ ಪರಿಶೀಲಿದ್ದಾರೆ. ಹಲ್ಲೆ ನಡೆದಿರುವ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಕರಣ ದಾಖಲಿಸಲು ಹಿಂದೇಟು ಹಾಕುತ್ತಿದ್ದಾರೆ. ಹಲ್ಲೆಗೆ ಕಾರಣರಾದವರ ವಿರುದ್ಧ ಕ್ರಮಕ್ಕೆ ಕೋರವಾರ ಗ್ರಾ.ಪಂ. ಪಿಡಿಒ ರಾಜಶ್ರೀ ಅವರು ಸೆಕ್ಟರಲ್ ಮ್ಯಾಜಿಸ್ಟ್ರೇಟ್ ಅವರಿಗೆ ಲಿಖಿತ ದೂರು ಸಲ್ಲಿಸಿದ್ದಾರೆ ಎನ್ನಲಾಗಿದೆ.
ಅಡುಗೆ ಸಿಬ್ಬಂದಿ ಕೂಡ ಪ್ರತ್ಯೇಕ ದೂರು ಸಲ್ಲಿಸಿದ್ದಾರಂತೆ. ಆದರೂ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಇಲ್ಲಿವರೆಗೆ ಜರುಗಿಸಿಲ್ಲ. ಕೆಲ ವಲಸೆ ಕಾರ್ಮಿಕರು ರಾಜಕೀಯ ನಾಯಕರ ಬೆಂಬಲಿಗರಿದ್ದಾರೆ. ತಮ್ಮ ಓಟ್ ಬ್ಯಾಂಕ್ ಉಳಿಸಿಕೊಳ್ಳಲು ಒತ್ತಡ ಹೇರಿ ಪ್ರಕರಣ ದಾಖಲಾಗದಂತೆ ನೋಡಿಕೊಳ್ಳುತ್ತಿದ್ದಾರೆ ಎಂಬ ಹೇಳಿಕೆಗಳು ಕೇಳಿಬರುತ್ತಿವೆ.
ಕೊರವಾರ ನವೋದಯ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಸಿಸಿಟಿವಿ ಸಹ ಇವೆ. ಇವುಗಳನ್ನು ಪರಿಶೀಲಿಸಿ ಕ್ರಮ ತೆಗೆದುಕೊಳ್ಳಬೇಕು ಎಂಬುದು ಕೆಲವರ ಒತ್ತಾಯ.