ಕಲಬುರಗಿ: ದ್ವಿತೀಯ ಪಿಯುಸಿ ಪ್ರಶ್ನೆ ಪತ್ರಿಕೆ ಸೋರಿಕೆ ವದಂತಿಯಿಂದ ವಿದ್ಯಾರ್ಥಿಗಳು ಹೈರಾಣಾದ ಘಟನೆ ಜಿಲ್ಲೆಯಲ್ಲಿ ನಡೆದಿದೆ.
ಇಂದು ನಡೆಯುತ್ತಿರುವ ದ್ವಿತೀಯ ಪಿಯುಸಿ ಕನ್ನಡ ಪರೀಕ್ಷೆಯ ಪ್ರಶ್ನೆಪತ್ರಿಕೆಯ ಎಲ್ಲ ಪುಟಗಳೂ ಸಾಮಾಜಿಕ ಜಾಲತಾಣದನಲ್ಲಿ ಹರಿದಾಡುತ್ತಿದೆ. ಪರೀಕ್ಷೆ ಆರಂಭಕ್ಕೂ ಮುನ್ನ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದ್ದು, ಬೆಳಿಗ್ಗೆ 9.30ಕ್ಕೆ ಕೆಲ ವಿದ್ಯಾರ್ಥಿಗಳ ಕೈ ತಲುಪಿವೆ ಎನ್ನಲಾಗುತ್ತಿದೆ.
ಕೆಲ ವಿದ್ಯಾರ್ಥಿಗಳು ಪ್ರಶ್ನೆ ಪತ್ರಿಕೆ ಝೆರಾಕ್ಸ್ ಮಾಡಿಸಿಕೊಂಡಿದ್ದಾರೆ. ಈ ಬಗ್ಗೆ ಪದವಿಪೂರ್ವ ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕ ಶಿವಶರಣಪ್ಪ ಮೋಳೆಗಾಂವ ಅವರನ್ನ ವಿಚಾರಿಸಿದಾಗ, ಈ ವರ್ಷದ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ. ಹಳೆಯ ಪ್ರಶ್ನೆಪತ್ರಿಕೆಯ ಮೇಲೆ ಈ ವರ್ಷದ ದಿನಾಂಕ ಹಾಕಲಾಗಿದೆ. ಈ ವರ್ಷದ್ದೆಂದು ಹಾಕಿ ಗೊಂದಲ ಮೂಡಿಸುವ ಕೃತ್ಯ ಮಾಡಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಅಲ್ಲದೆ ಈ ಕುರಿತು ಸೂಕ್ತ ಕ್ರಮ ಕೈಗೊಳ್ಳಲಾಗುವುದು. ವಾಟ್ಸಾಪ್ನಲ್ಲಿ ಹರಿಬಿಟ್ಟ ಕಿಡಿಗೇಡಿಗಳ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ವಿದ್ಯಾರ್ಥಿಗಳು ಯಾವುದೇ ಗೊಂದಲಕ್ಕೆ ಒಳಗಾಗದೆ ಪರೀಕ್ಷೆಗಳಿಗೆ ಹಾಜರಾಗುವಂತೆಯೂ ಸೂಚಿಸಿದ್ದಾರೆ.