ಕಲಬುರಗಿ: ಕಾಂಗ್ರೆಸ್‌ನವರು ಆರೋಪ ಮಾಡ್ತಾರೆ, ದಾಖಲಾತಿ ಕೇಳಿದ್ರೆ ಓಡಿ ಹೋಗ್ತಾರೆ. ಪ್ರಿಯಾಂಕ್ ಖರ್ಗೆಗೆ ನೋಟಿಸ್ ಕೊಟ್ರೂ ಹಾಜರಾಗಲ್ಲ. ತನಿಖೆ ಸರಿಯಾಗಿ ನಡೆದರೆ ಎಲ್ಲಿ ತಮ್ಮ ಬುಡಕ್ಕೆ ಬರುತ್ತೋ ಎಂದು ತನಿಖೆಯನ್ನು ದಿಕ್ಕು ತಪ್ಪಿಸುವ ಪ್ರಯತ್ನವನ್ನು ಕಾಂಗ್ರೆಸ್‌ನವರು ಮಾಡ್ತಿದ್ದಾರೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಸಚಿವರು, ಪಿಎಸ್ಐ ನೇಮಕಾತಿ ಅಕ್ರಮದಲ್ಲಿ 300 ಕೋಟಿ ರೂ ಅಕ್ರಮ ನಡೆದಿದೆ ಎಂಬ ಸಿದ್ದರಾಮಯ್ಯ ಆರೋಪಕ್ಕೆ ತಿರುಗೇಟು ಕೊಟ್ಟರು. ಸಿದ್ದರಾಮಯ್ಯ 300 ಕೋಟಿ ಅಲ್ಲ 3,000 ಕೋಟಿ ಆರೋಪ ಮಾಡ್ಲಿ, ಮಾತಾಡೋಕೆ ಅವರಿಗೆ ವಾಕ್ ಸ್ವಾತಂತ್ರ್ಯ ಇದೆ. ನಿರಾಧಾರವಾಗಿ ಆರೋಪ ಮಾಡೋದು, ದಾಖಲಾತಿ ಕೇಳಿದ್ರೆ ಓಡಿಹೋಗೋದು ಕಾಂಗ್ರೆಸ್ ಕೆಲಸ. ಪ್ರಕರಣದಲ್ಲಿ ಸಿಲುಕಿದವರು ಬಹುತೇಕ ಕಾಂಗ್ರೆಸ್ನವರೇ ಎಂದರು.
ಪ್ರಕರಣದ ತನಿಖೆ ಸರಿಯಾದ ದಿಕ್ಕಿನಲ್ಲಿ ನಡೆಯುತ್ತಿದೆ. ಅಕ್ರಮದಲ್ಲಿ ಕೈ ಹಾಕಿದವರು ಇನ್ನೊಮ್ಮೆ ಹೀಗೆ ಮಾಡಬಾರದು. ಮುಟ್ಟಿ ನೋಡ್ಕೋಬೇಕು, ಹಾಗೆ ಮಾಡ್ತೀವಿ ಎಂದು ಅವರು ಎಚ್ಚರಿಕೆ ಕೊಟ್ಟರು.
ಇದನ್ನೂ ಓದಿ: ಕೌಟುಂಬಿಕ ಕಿರುಕುಳ: ಪತ್ನಿ ಜೀವನಾಂಶಕ್ಕೆ ಅರ್ಹಳು- ಹೈಕೋರ್ಟ್
ಪಿಎಸ್ಐಗೆ ಅವಾಚ್ಯವಾಗಿ ನಿಂದಿಸಿದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಅವರನ್ನು ಕರೆಸಿ ಮಾತನಾಡುತ್ತೇನೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದ್ದಾರೆ. ನಮ್ಮ ಶಾಸಕರು ತಾಳ್ಮೆ ಕಳೆದುಕೊಂಡಿದ್ದಾರೆ ಅಂತ ಅನ್ಸುತ್ತೆ. ಎಂಪಿ ಕುಮಾರಸ್ವಾಮಿ ಅವರು ತಾಳ್ಮೆ ಕಳೆದುಕೊಂಡಿದ್ದಾರೆ. ಪಿಎಸ್ಐಗೆ ಅವಾಚ್ಯವಾಗಿ ನಿಂದನೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ, ನಾನು ರಿಪೋರ್ಟ್ ತರಿಸಿಕೊಳ್ಳುತ್ತೇನೆ. ಶಾಸಕರನ್ನು ಕರೆಸಿ ಮಾತನಾಡುವುದಾಗಿ ಹೇಳಿದರು.
ಇನ್ನು PWD ಇಲಾಖೆ ನೇಮಕಾತಿಯಲ್ಲೂ ಅಕ್ರಮ ನಡೆದಿದೆ ಎನ್ನುವ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್ ಶಿಟ್ ಆಗಿದೆ. ಸದ್ಯ ಪಿಎಸ್ಐ ಪ್ರಕರಣದಲ್ಲಿ ಬೇರು ಮಟ್ಟಕ್ಕೆ ಹೋಗಿದ್ದೇವೆ. ಅಕ್ರಮ ಮಾಡಿದವರನ್ನು ಬಿಡೋದಿಲ್ಲ, ನಾವ್ಯಾರು ಈ ಸೂತಕದಲ್ಲಿ ಇಲ್ಲ. ನಮಗೆ ನೈತಿಕತೆ ಇದೆ. ತನಿಖೆ ಮಾಡಿಸುತ್ತೇವೆ. ಮೈಸೂರಲ್ಲಿ ಮಿನಿ ಪಾಕಿಸ್ತಾನ ಘೋಷಣೆ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿ, ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿ ವರದಿ ಕೇಳಿದ್ದೇನೆ ಎಂದು ಸಚಿವರು ತಿಳಿಸಿದರು.