ಕಲಬುರಗಿ: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್ಐ) ನೇಮಕಾತಿ ಹಗರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿದ್ದ ಇಲ್ಲಿಯ ಜ್ಞಾನಜ್ಯೋತಿ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ ಸೇರಿದಂತೆ ಒಟ್ಟು 26 ಆರೋಪಿಗಳಿಗೆ ಜಿಲ್ಲಾ ನ್ಯಾಯಾಲಯ ಗುರುವಾರ ಜಾಮೀನು ಮಂಜೂರು ಮಾಡಿದೆ. ಅಕ್ರಮದ ಕೇಂದ್ರಬಿಂದುವಾಗಿದ್ದ ಶಾಲೆಯ ಮುಖ್ಯಸ್ಥೆ ದಿವ್ಯಾ ಹಾಗರಗಿ, ಪ್ರಾಂಶುಪಾಲ ಕಾಶಿನಾಥ್ ಚಿಲ್, ಮಂಜುನಾಥ್ ಮೇಳಕುಂದಿ, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ಸೇರಿದಂತೆ ಒಟ್ಟು 26 ಜನರಿಗೆ ಕಲಬುರಗಿ ಜಿಲ್ಲಾ ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ.ಪಾಟೀಲ್ ಅವರು ಷರತ್ತುಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದ್ದಾರೆ.
ಈಗಾಗಲೇ ಕಿಂಗ್‌ಪಿನ್ ಆರ್.ಡಿ.ಪಾಟೀಲ್ ಮತ್ತು ಅವರ ಸಹೋದರ ಮಹಾಂತೇಶ ಪಾಟೀಲ್ ಸೇರಿ ಇತರರು ಜಾಮೀನಿನ ಮೇಲೆ ಹೊರಗಿದ್ದಾರೆ. ಈ ಮೂಲಕ ಇಲ್ಲಿಯವರೆಗೆ ನೇಮಕಾತಿಯ ಅಕ್ರಮದಲ್ಲಿ 36 ಜನರಿಗೆ ಜಾಮೀನು ಸಿಕ್ಕಂತಾಗಿದೆ. ರಾಜ್ಯದಲ್ಲಿ 2021ರಲ್ಲಿ 545 ಪಿಎಸ್ಐ ಹುದ್ದೆಗಳ ನೇಮಕಾತಿ ಸಂಬಂಧಿಸಿದಂತೆ ಪರೀಕ್ಷೆ ನಡೆಸಲಾಗಿತ್ತು. ಬಳಿಕ ನೇಮಕಾತಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿರುವುದು ಬೆಳಕಿಗೆ ಬಂದಿದೆ. ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳೇ ಪ್ರಕರಣದಲ್ಲಿ ಶಾಮೀಲಾಗಿದ್ದು ತಿಳಿದು ಬಂದಿತ್ತು.
ಹೀಗಾಗಿ ಸರ್ಕಾರ ಪ್ರಕರಣದ ತನಿಖೆಯನ್ನು ಸಿಐಡಿಗೆ ನೀಡಿತ್ತು. 2022ರ ಏಪ್ರಿಲ್ 8ರಂದು ಕಲಬುರಗಿ ಚೌಕ್ ಠಾಣೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ಪ್ರಕರಣ ಸಿಐಡಿಗೆ ವರ್ಗಾವಣೆಯಾಗಿದೆ. ಸಿಐಡಿಗೆ ಪ್ರಕರಣ ಹಸ್ತಾಂತರವಾದ ಬೆನ್ನಲ್ಲೇ ಏಪ್ರಿಲ್ 16ರಂದು ಸಿಐಡಿ, ಜ್ಞಾನಜ್ಯೋತಿ ಶಾಲೆಯ ಪರೀಕ್ಷಾ ಕೇಂದ್ರದ ಮೇಲ್ವಿಚಾರಕಿಯರಾದ ಸುಮಾ, ಸಿದ್ದಮ್ಮ ಮತ್ತು ಸಾವಿತ್ರಿ ಎಂಬವರನ್ನು ಬಂಧಿಸಿದೆ. ಅಲ್ಲದೇ ಎಲ್ಲ ಆರೋಪಿಳನ್ನು ನ್ಯಾಯಾಂಗ ಬಂಧನಕ್ಕೊಳಪಡಿಸಿದ್ದರು.
ಮೂವರು ಮೇಲ್ವಿಚಾರಕಿಯರನ್ನು ಬಂಧಿಸಿದ ಬೆನ್ನಲ್ಲೇ ತನಿಖೆ ಚುರುಕುಗೊಳಿಸಿದ ತನಿಖಾಧಿಕಾರಿಗಳು, ಅಕ್ರಮಕ್ಕೆ ಸಂಬಂಧಿಸಿದಂತೆ ಶಾಲೆಯ ಒಡತಿ ದಿವ್ಯಾ ಹಾಗರಗಿ, ಪತಿ ರಾಜೇಶ್ ಹಾಗರಗಿ, ಮುಖ್ಯ ಶಿಕ್ಷಕ ಕಾಶಿನಾಥ್, ಶಿಕ್ಷಕಿ ಅರ್ಚನಾ, ಕಿಂಗ್‌ಪಿನ್‌ಗಳಾದ ಮಂಜುನಾಥ ಮೇಳಕುಂದಿ, ಆರ್.ಡಿ.ಪಾಟೀಲ್, ಕಾಂಗ್ರೆಸ್ ಮುಖಂಡ ಮಹಾಂತೇಶ್ ಪಾಟೀಲ್, ಕೆಎಸ್‌ಆರ್‌ಪಿ ಅಸಿಸ್ಟೆಂಟ್ ಕಮಾಂಡೆಂಟ್ ವೈಜನಾಥ್ ಬಿರಾದಾರ್, ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ, ಸಿಪಿಐ ಆನಂದ ಮೇತ್ರೆ ಸೇರಿದಂತೆ 34 ಆರೋಪಿಗಳನ್ನು ಬಂಧಿಸಿದ್ದರು. ಆರೋಪಿಗಳ ವಿರುದ್ಧ ಎಫ್‌ಐಆರ್ ದಾಖಲಿಸಿ ವಿಚಾರಣೆ ನಡೆಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಪತಿಗೆ ಜಾಮೀನು ಮಂಜೂರು: ಇದಕ್ಕೂ ಮುನ್ನ ದಿವ್ಯಾ ಹಾಗರಗಿ ಜಾಮೀನು ಕೋರಿ ಹಲವು ಬಾರಿ ಅರ್ಜಿ ಸಲ್ಲಿಸಿದ್ದರು. ಅವರ ಅರ್ಜಿಯನ್ನು ಕೋರ್ಟ್ ವಜಾ ಮಾಡಿತ್ತು. ಆದರೆ, ಇದೇ ಅಕ್ರಮ ಪ್ರಕರಣದಲ್ಲಿ ಜೈಲು ಪಾಲಾಗಿದ್ದ ದಿವ್ಯಾ ಪತಿ ರಾಜೇಶ ಹಾಗರಗಿಗೆ ಸೆ.28ರಂದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಅಂದು ನ್ಯಾಯಪೀಠ ಹೇಳಿದ್ದೇನು?: ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಪತಿ ಎಂಬ ಕಾರಣಕ್ಕೆ ಜಾಮೀನು ನಿರಾಕರಿಸಲಾಗದು. ಆರೋಪ ಸಾಬೀತುಪಡಿಸುವ ದಾಖಲೆಗಳು ಇರಬೇಕು. ಐಪಿಸಿ ಸೆಕ್ಷನ್ 212 ಹೊರತುಪಡಿಸಿ, ಅರ್ಜಿದಾರ ಆರೋಪಿ ವಿರುದ್ಧ ಗಂಭೀರ ಆರೋಪಗಳು ಕಾಣುತ್ತಿಲ್ಲ. ಆದ್ದರಿಂದ ಪೀಠ ಜಾಮೀನು ನೀಡಲು ನಿರ್ಧರಿಸಿದೆ ಎಂದು ನ್ಯಾಯಮೂರ್ತಿ ಎಂ.ಜಿ.ಉಮಾ ಅವರ ನೇತೃತ್ವದ ಏಕಸದಸ್ಯ ಪೀಠ ಜಾಮೀನು ಆದೇಶದಲ್ಲಿ ಹೇಳಿತ್ತು.
ಚಾರ್ಜ್‌ಶೀಟ್ ಸಲ್ಲಿಕೆ: ಜ್ಞಾನಜ್ಯೋತಿ ಶಾಲೆಯಲ್ಲಿ ನಡೆದ ದುಷ್ಕೃತ್ಯಕ್ಕೆ ಸಂಬಂಧಿಸಿದಂತೆ ಜುಲೈ 6ರಂದು ಕಲಬುರಗಿ ಮೂರನೇ ಜೆಎಂಎಫ್‌ಸಿ ಕೋರ್ಟ್‌ಗೆ ತನಿಖಾಧಿಕಾರಿ ಡಿವೈಎಸ್‌ಪಿ ಪ್ರಕಾಶ ರಾಠೋಡ್ ನೇತೃತ್ವದಲ್ಲಿ ಸುದೀರ್ಘವಾಗಿ 2,000 ಪುಟಗಳುಳ್ಳ ಚಾರ್ಜ್‌ಶೀಟ್ ಸಲ್ಲಿಸಿದ್ದರು.