ಕಲಬುರಗಿ: ಭೀಕರ ಪ್ರವಾಹದಿಂದ ಬೆಳೆ ಹಾನಿ ಸಂಭವಿಸಿ ಭೀಮಾ ನದಿ ಪಾತ್ರದ ರೈತರು ಸಂಕಷ್ಟ ಎದುರಿಸುತ್ತಿದ್ದು, ಸರ್ಕಾರ ಕೂಡಲೇ ಸೂಕ್ತ ಬೆಳೆ ಪರಿಹಾರ ನೀಡುವಂತೆ ಭಾರತೀಯ ಕಮ್ಯೂನಿಸ್ಟ್ ಪಕ್ಷ (ಸಿಪಿಐ) ರಾಜ್ಯ ಕಾರ್ಯದರ್ಶಿ ಡಾ. ಕೆ.ಎಸ್.ಜನಾರ್ಧನ್ ಆಗ್ರಹಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಅವರು, ರಾಜ್ಯದ ಹಲವು ಭಾಗಗಳಲ್ಲಿ ಪ್ರವಾಹ ಬಂದು ರೈತರ ಬೆಳೆ ಸಂಪೂರ್ಣ ನಾಶವಾಗಿದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಳೆ ಪರಿಹಾರ ನೀಡುವ ಮೂಲಕ ಭೀಮಾ ನದಿ ಪಾತ್ರದ ರೈತರಿಗೆ ನೆರವಾಗಬೇಕು. ಕೂಡಲೇ ಕೇಂದ್ರ ಸರ್ಕಾರ ಐದು ಸಾವಿರ ಕೋಟಿ ಅನುದಾನ ಬಿಡುಗಡೆ ಮಾಡಿ ಪ್ರವಾಹದಿಂದ ಹಾನಿ ಅನುಭವಿಸಿರುವ ರೈತರಿಗೆ ಪರಿಹಾರ ನೀಡಬೇಕು ಎಂದು ಒತ್ತಾಯಿಸಿದರು.
ಇನ್ನು ರಾಜ್ಯದ ವಿವಿಧ ತಾಲೂಕುಗಳಲ್ಲಿ ಇಂದಿಗೂ ಬರ ತಾಂಡವವಾಡುತ್ತಿದ್ದು, ಕುಡಿಯುವ ನೀರಿಗೆ ಜನ ಪರದಾಡುವಂತಾಗಿದೆ. ಆದ್ದರಿಂದ ಸರ್ಕಾರ ಜನರ ಕಷ್ಟಕ್ಕೆ ಸ್ಪಂದಿಸಬೇಕು ಎಂದು ಆಗ್ರಹಿಸಿದರು.