ಸೇಡಂ: ಕಾರ್ಮಿಕರ ಕೆಲಸದ ಅವಧಿ ವಿಸ್ತರಿಸಿರುವ ಕೇಂದ್ರ ಸರ್ಕಾರದ ನಡೆ ವಿರೋಧಿಸಿ ಸುತ್ತೋಲೆಗೆ ಬೆಂಕಿ ಹಚ್ಚಿ ಸಿಐಟಿಯು ಆಕ್ರೋಶ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರ ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ವಿಸ್ತರಿಸಿದೆ. ಈ ಹಿನ್ನೆಲೆ ನಗರದ ಸಹಾಯಕ ಆಯುಕ್ತರ ಕಚೇರಿ ಎದುರು ಬೆಂಕಿ ಹಚ್ಚಿದ ಕಾರ್ಮಿಕ ಸಂಘಟನೆಗಳು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ನಗರದ ವಿವಿಧ ಸಂಘಟನೆಗಳ ಪ್ರಮುಖರು ಮತ್ತು ಕಾರ್ಮಿಕರು ತಹಶೀಲ್ದಾರ್ ಸುಬ್ಬಣ್ಣ ಜಮಖಂಡಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ರಾಜಶ್ರೀ ಸಿಮೆಂಟ್ ವರ್ಕರ್ಸ್ ಯುನಿಯನ್ ಅಧ್ಯಕ್ಷ ಜಮೀಲ ಆಲಂಪುರಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಇದರಿಂದ ಕಾರ್ಮಿಕರ ಜೀವನದ ಮೇಲೆ ಬಹುದೊಡ್ಡ ದುಷ್ಪರಿಣಾಮ ಬೀರಲಿದೆ. ಈವರೆಗೂ ಬಡವರಿಗೆ, ಕಾರ್ಮಿಕರಿಗೆ ಸರ್ಕಾರದ ವತಿಯಿಂದ ನೀಡಿದ ದವಸ ಧಾನ್ಯಗಳ ಕಿಟ್ಗಳು ಸಹ ಕಳಪೆ ಮಟ್ಟದ್ದಾಗಿವೆ ಎಂದು ಆರೋಪಿಸಿದರು.