ಕಲಬುರಗಿ: ಸಿಎಎ, ಎನ್ಆರ್ಸಿ ವಿರೋಧಿಸಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ವಾಡಿ ಪಟ್ಟಣದಲ್ಲಿ ಇಂದು ಪ್ರತಿಭಟನೆ ನಡೆಸಲಾಯಿತು.
ನಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿದ ಸಿಎಎ, ಎನ್ಆರ್ಸಿ ವಿರೋಧಿ ಒಕ್ಕೂಟದ ಕಾರ್ಯಕರ್ತರು, ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ವಾಡಿ ಪಟ್ಟಣದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಏರ್ಪಡಿಸಿದ್ದ ಸಮಾವೇಶದಲ್ಲಿ ಅನೇಕ ಸಾಹಿತಿಗಳು, ಪ್ರಗತಿಪರ ಚಿಂತಕರು ಭಾಗವಹಿಸಿದ್ದರು.
ಈ ವೇಳೆ ಸಮಾವೇಶ ಉದ್ದೇಶಿಸಿ ಮಾತನಾಡಿದ ಜನವಾದಿ ಮಹಿಳಾ ಸಂಘಟನೆ ಉಪಾಧ್ಯಕ್ಷೆ ಕೆ.ನೀಲಾ, ಸಿಎಎ ಹಾಗೂ ಎನ್ಆರ್ಸಿ ಸಂವಿಧಾನ ವಿರೋಧಿ ಕಾಯ್ದೆಯಾಗಿವೆ. ಕೇಂದ್ರ ಬಿಜೆಪಿ ಸರ್ಕಾರ ಧರ್ಮಗಳ ಆಧಾರದ ಮೇಲೆ ದೇಶ ಒಡೆಯುವ ಸಂಚು ನಡೆಸಿದೆ. ಭಾರತದ ಸಂವಿಧಾನ ಧರ್ಮದ ಆಧಾರದ ಮೇಲೆ ರಚಿಸಲಾಗಿಲ್ಲ. ಬಿಜೆಪಿ ಸರ್ಕಾರ ಸಂವಿಧಾನದ ಆಶಯವನ್ನು ಗಾಳಿಗೆ ತೂರಿ ಜನ ವಿರೋಧಿ ಆಡಳಿತ ನಡೆಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನು ಈ ವೇಳೆ ಹಿರಿಯ ನ್ಯಾಯವಾದಿ ನಾಸೀರ್ ಹುಸೇನ್ ಉಸ್ತಾದ್, ದಲಿತ ಮುಖಂಡ ಟೋಪ್ಪಣ್ಣಾ ಕೋಮಟೆ, ಜಿಲ್ಲಾ ಪಂಚಾಯತ್ ವಿರೋಧ ಪಕ್ಷದ ನಾಯಕ ಶಿವಾನಂದ ಪಾಟೀಲ್, ಮುಸ್ಲಿಂ ಸಮುದಾಯದ ಮುಖಂಡರಾದ ಮಹಿಮೂದ್ ಸಾಹೇಬ್, ಮಖ್ಬೂಲ್ ಜಾನಿ, ವಹಾಜ್ ಬಾಬಾ, ಎಸ್ಡಿಟಿ ಯು ರಹೀಮ್ ಪಟೇಲ್, ಎಸ್ಯುಸಿಐ ಮುಖಂಡ ರಾಮಣ್ಣಾ ಇಬ್ರಾಹಿಮಪೂರ್, ಮಝರ್ ಹುಸೇನ್, ನಾಗೇಂದ್ರ ಜವಳಿ, ಶ್ರವಣ ಕುಮಾರ್ ಮೋಸಲಗಿ ಸೇರಿದಂತೆ ಒಕ್ಕೂಟದ ಸದಸ್ಯರು ಹಾಗೂ ಪ್ರಮುಖರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.