ಕಲಬುರಗಿ: ಅನುದಾನ ರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳಿಂದ ಹೋರಾಟ ಮುಂದುವರೆದಿದ್ದು, ಕಲಬುರಗಿಯಲ್ಲಿ ಜನಪ್ರತಿನಿಧಿಗಳ ಮನೆಗಳ ಮುಂದೆ ಗಂಟೆ ಬಾರಿಸಿ, ಬೊಬ್ಬೆ ಹೊಡೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಲಾಯಿತು.
ನಿರಂತರವಾಗಿ ಪ್ರತಿಭಟನೆ ನಡೆಸುತ್ತಿರುವ ಖಾಸಗಿ ಶಾಲೆ ಶಿಕ್ಷಕರು ಹಾಗೂ ಮಾಲೀಕರು ಇಂದು ಸಹ ಜಿಲ್ಲೆಯ ಶಾಸಕರು ಹಾಗೂ ಸಂಸದರ ಮನೆಯ ಮುಂದೆ ಬೊಬ್ಬೆ ಹೊಡೆಯುವ ಮೂಲಕ ವಿಭಿನ್ನವಾಗಿ ಪ್ರತಿಭಟನೆ ನಡೆಸಿದರು. ಈ ವೇಳೆ ಖಾಸಗಿ ಶಾಲಾ ಸಂಸ್ಥಾಪಕನೋರ್ವ ಶಾಸಕ ಪಾಟೀಲ ಅವರ ಕಾಲಿಗೆ ಬಿದ್ದು ಅನುದಾನ ಕೊಡಿಸಿಕೊಡಿ ಎಂದು ಮನವಿ ಮಾಡಿಕೊಂಡ ಘಟನೆ ನಡೆದಿದೆ.
ಸಂಸದ ಉಮೇಶ ಜಾಧವ, ಶಾಸಕ ಬಸವರಾಜ ಮತ್ತಿಮೂಡ, ಎಂ.ವೈ. ಪಾಟೀಲ ಸೇರಿದಂತೆ ಇನ್ನಿತರೆ ಎಮ್ಎಲ್ಎ ಗಳ ಮನೆಯ ಮುಂದೆ ಗಂಟೆ ಬಾರಿಸಿ ಬೊಬ್ಬೆ ಹೊಡೆದು ಪ್ರತಿಭಟನೆ ನಡೆಸಿದ ಖಾಸಗಿ ಶಾಲೆ ಶಿಕ್ಷಕರು ಹಾಗೂ ಮಾಲೀಕರು ಜನಪ್ರತಿನಿಧಿಗಳು ಹಾಗೂ ಶಿಕ್ಷಣ ಸಚಿವ ಸುರೇಶ್ ಕುಮಾರ ವಿರುದ್ಧ ಘೋಷಣೆ ಕೂಗಿದರು.
ಘಟನೆ ತಿಳಿದು ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಅಫಜಲಪುರ ಶಾಸಕ ಎಂ. ವೈ. ಪಾಟೀಲ, ಖಾಸಗಿ ಶಾಲೆಗಳ ಶಿಕ್ಷಕರ ಬೇಡಿಕೆ ನ್ಯಾಯಯುತವಾಗಿದೆ. ಈ ಕುರಿತು ಶಾಸಕರೊಂದಿಗೆ ಚರ್ಚಿಸಿ ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಪಡುತ್ತೇವೆ ಎಂದು ಭರವಸೆ ನೀಡಿದರು.
ಓದಿ: 'ಕೃಷಿ ವಿವಿ ಸಿಬ್ಬಂದಿ ಕಾರು ಅಪಘಾತ ಪ್ರಕರಣ'ವನ್ನು ಸಿಬಿಐಗೆ ನೀಡುವಂತೆ ಆಗ್ರಹಿಸಿ ಪ್ರತಿಭಟನೆ
ಖಾಸಗಿ ಶಿಕ್ಷಣ ಸಂಸ್ಥೆಗಳ ಬೇಡಿಕೆಗಳ ಬಗ್ಗೆ ಈ ಭಾಗದ ಜನಪ್ರತಿನಿಧಿಗಳು ಧ್ವನಿ ಎತ್ತುತ್ತಿಲ್ಲ. ಹೀಗಾಗಿ ನಮ್ಮ ಖಾಸಗಿ ಶಾಲೆಗಳು ಅಳಿವಿನ ಅಂಚಿಗೆ ಬಂದು ನಿಂತಿವೆ. ಖಾಸಗಿ ಶಿಕ್ಷಣ ಸಂಸ್ಥೆಯ ಮಾಲೀಕರು ಸಾಲ ಮಾಡಿ ಸಂಸ್ಥೆಗಳನ್ನು ಸ್ಥಾಪಿಸಿದ್ದಾರೆ. ಇದೀಗ ಸಾಲ ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಕೂಡಲೇ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅನುದಾನ ರಹಿತ ಶಾಲೆಗಳಿಗೆ ಅನುದಾನ ಬಿಡುಗಡೆ ಮಾಡಬೇಕು. ಇಲ್ಲವಾದರೆ ಶಿಕ್ಷಣ ಸಚಿವ ಸುರೇಶ ಕುಮಾರ ಹಾಗೂ ಸಿಎಂ ಯಡಿಯೂರಪ್ಪರವರ ಮನೆ ಮುಂದೆ ಬೊಬ್ಬೆ ಹೊಡೆದು ಉಗ್ರ ಹೋರಾಟ ನಡೆಸುತ್ತೇವೆ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದರು.