ಕಲಬುರಗಿ: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಕಗ್ಗಂಟು ನೋಡಿದ್ರೆ, ಅಯ್ಯೋ ಎನ್ನಿಸುತ್ತಿದೆ ಎಂದು ಮಾಜಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ನಗರದಲ್ಲಿ ಮಾತನಾಡಿದ ಅವರು, ಉಪ್ಪು ತಿಂದವರು ನೀರು ಕುಡಿಯಲೇಬೇಕು. ಆಪರೇಷನ್ ಕಮಲ ಹೇಗೆ ನಡೆಯಿತು ಎಂದು ಎಲ್ಲರಿಗೂ ಗೊತ್ತಿದೆ. ಶಾಸಕರನ್ನು ಖರೀದಿ ಮಾಡಿ, ಸರ್ಕಾರ ರಚನೆ ಮಾಡಲಾಗಿದೆ. ವಲಸಿಗರಿಗೆ ಸಚಿವ ಸ್ಥಾನ ಕೊಡ್ತಿರೋದ್ರಿಂದ ಮೂಲ ಬಿಜೆಪಿಗರಲ್ಲಿ ಅಸಮಾಧಾನದ ಹೊಗೆ ಎದ್ದಿದೆ ಎಂದರು.
ಸಚಿವ ಸಂಪುಟ ವಿಸ್ತರಣೆಯಾದ ಒಂದು ವಾರದಲ್ಲಿ ಅಸಮಾಧಾನ ಬಹಿರಂಗವಾಗುತ್ತೆ. ಸಚಿವ ಸಂಪುಟ ವಿಸ್ತರಣೆಗಾಗಿ ಹೈಕಮಾಂಡ್ ಭೇಟಿಗೆ, ಸಿಎಂ ಬಿಎಸ್ವೈ ನಾಲ್ಕು ದಿನ ಕಾದ್ರು. ಸಿಎಂ ಯಡಿಯೂರಪ್ಪ ಸ್ಥಿತಿ ನೋಡಿದ್ರೆ ಬೇಜಾರಾಗುತ್ತೆ ಎಂದು ವ್ಯಂಗ್ಯವಾಡಿದರು. ರಾಜ್ಯ ಸರ್ಕಾರದಲ್ಲಿ ವರ್ಗಾವಣೆ ದಂಧೆ ಬಿಟ್ರೆ ಬೇರೆ ನಡೀತಿಲ್ಲ. ಪಿಸಿಯಿಂದ ಹಿಡಿದು ಡಿಸಿಯವರೆಗೂ ವರ್ಗಾವಣೆಗೆ ರೇಟ್ ಫಿಕ್ಸ್ ಮಾಡಿದ್ದಾರೆ ಎಂದು ಆರೋಪಿಸಿದರು. ಜನ ನೆರೆ ಹಾಗೂ ಬರದಿಂದ ಸಂಕಷ್ಟಕ್ಕೆ ಗುರಿಯಾದ್ರೂ, ಅವರ ಬಗ್ಗೆ ಸರ್ಕಾರಕ್ಕೆ ಕಾಳಜಿಯೇ ಇಲ್ಲ. ಆಡಳಿತದಲ್ಲಿ ಕೇಸರೀಕರಣ ಮಾಡೋ ಹುನ್ನಾರ ನಡೀತಿದೆ. ಈಗಲಾದ್ರೂ ಆಡಳಿತ ಯಂತ್ರ ಸರಿದಾರಿಗೆ ಬರಲಿ ಎಂದು ಆಗ್ರಹಿಸಿದರು.
ಯುವಕನ ಫೈರಿಂಗ್ ಪ್ರಕರಣಕ್ಕೆ ಮೋದಿ, ಶಾ ಕಾರಣ
ಪೌರತ್ವ ವಿರೋಧಿ ಹೋರಾಟ ನಿರತ ವಿದ್ಯಾರ್ಥಿಗಳ ಮೇಲೆ, ಯುವಕ ಫೈರಿಂಗ್ ಮಾಡಿರುವುದಕ್ಕೆ, ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರೇ ಕಾರಣ ಎಂದರು. ದೆಹಲಿಯ ಘಟನೆ ದುರದೃಷ್ಟಕರ. ಯುವಕರನ್ನು ಬ್ರೈನ್ ವಾಶ್ ಮಾಡಿ, ಮತಾಂಧರನ್ನಾಗಿ ಮಾಡಲಾಗುತ್ತಿದೆ. ಪ್ರಧಾನಿ ಮೋದಿ, ಅಮಿತ್ ಶಾ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಸಚಿವ ಅನುರಾಗ್ ಠಾಕೂರ್ ಸೇರಿದಂತೆ, ಮೊದಲಾದ ಬಿಜೆಪಿ ನಾಯಕರು ಪ್ರಚೋದನಾಕಾರಿ ಹೇಳಿಕೆ ನೀಡಿ ಎತ್ತಿಕಟ್ಟುವ ಕೆಲಸ ಮಾಡುತ್ತಿದ್ದಾರೆ ಎಂದರು.
ಪಿಸ್ತೂಲ್ ಹಿಡಿದು ಹಾಡಹಗಲೇ ಪೊಲೀಸರ ಎದುರಲ್ಲಿಯೇ, ಫೈರಿಂಗ್ ಮಾಡ್ತಾರೆ ಅಂದ್ರೆ ಅರ್ಥವೇನು ಎಂದು ಪ್ರಶ್ನಿಸಿದರು. ಬಿಜೆಪಿ ನಾಯಕರ ಪ್ರಚೋದನಕಾರಿ ಹೇಳಿಕೆಗಳು ಈ ರೀತಿಯ ಘಟನೆಗಳಿಗೆ ಕುಮ್ಮಕ್ಕು ನೀಡುತ್ತಿವೆ ಎಂದು ಕಿಡಿಕಾರಿದರು.
ಕೇಂದ್ರ ಬಜೆಟ್ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಳ್ಳಬೇಡಿ
ಕೇಂದ್ರ ಬಜೆಟ್ನಲ್ಲಿ ರಾಜ್ಯಕ್ಕೆ ಕೇಂದ್ರ ಸರ್ಕಾರ ಏನಾದ್ರು ಕೊಡುವುದರ ಬಗ್ಗೆ ನನಗೆ ಅನುಮಾನವಿದೆ. ಈ ಹಿಂದೆಯೂ ಮೋದಿ ಆಡಳಿತದಲ್ಲಿ, ರಾಜ್ಯಕ್ಕೆ ಹೇಳಿಕೊಳ್ಳುವ ಹಾಗೆ ಏನು ಕೊಟ್ಟಿಲ್ಲ. ಕಲ್ಯಾಣ ಕರ್ನಾಟಕಕ್ಕೂ ಈ ಬಾರಿಯೂ ಏನು ಕೊಡುವ ಭರವಸೆಯಿಲ್ಲ ಎಂದರು. ರಾಜ್ಯದ ಬಿಜೆಪಿ ನಾಯಕರೇ ಅವರ ಸ್ಥಾನಮಾನ ಕೇಳಲು ಹೆದರುತ್ತಿದ್ದಾರೆ. ಹೀಗಿರುವಾಗ ಕಲ್ಯಾಣ ಕರ್ನಾಟಕದ ಜನರೇ ಕೇಂದ್ರ ಬಜೆಟ್ ಬಗ್ಗೆ ಏನು ನಿರೀಕ್ಷೆ ಇಟ್ಟುಕೊಳ್ಳಬೇಡಿ ಎಂದರು. ಇಲ್ಲಿನ ಬಿಜೆಪಿ ಸಂಸದರು ಅಲ್ಲಿ ವಾದ ಮಂಡಿಸಲು ಅಸಮರ್ಥರಿದ್ದಾರೆ ಎಂದು ದೂರಿದರು.