ಕಲಬುರಗಿ: ಕೋವಿಡ್- 19 ಆತಂಕದ ನಡುವೆಯೇ ಸರ್ಕಾರ ಕೆಎಎಸ್ ಪರೀಕ್ಷೆ ನಡೆಸಲು ಮುಂದಾಗಿದೆ. ಕೊರೊನಾ ಬಿಕ್ಕಟ್ಟಿನ ನಡುವೆ ಅಭ್ಯರ್ಥಿಗಳು ಹೇಗೆ ಪರೀಕ್ಷೆ ಬರೆಯಬೇಕು ಎಂದು ಆತಂಕಕ್ಕೊಳಗಾಗಿದ್ದಾರೆ ಎಂದು ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಶಾಸಕ ಖರ್ಗೆ, ಈ ಪರೀಕ್ಷೆಯಲ್ಲಿ ಒಟ್ಟು 1,65,258 ಅಭ್ಯರ್ಥಿಗಳು ಹಾಜರಾಗಲಿದ್ದಾರೆ. ಈಗಾಗಲೇ ಸೋಂಕಿನಿಂದ ಬಳಲುತ್ತಿರುವವರು ಹಾಗೂ ಹೋಂ ಕ್ವಾರಂಟೈನ್ನಲ್ಲಿ ಇರುವವರು ಪರೀಕ್ಷೆ ಎದುರಿಸಲು ತೊಂದರೆಯಾಗುತ್ತದೆ ಎಂದು ಕರೆ ಮಾಡಿ ತಮ್ಮ ಆತಂಕ ವ್ಯಕ್ತಪಡಿಸಿದ್ದಾರೆ.
ಜೊತೆಗೆ ಪರೀಕ್ಷೆಗೆ ಹಾಜರಾಗುವವರನ್ನು ರ್ಯಾಪಿಡ್ ಟೆಸ್ಟ್ ಮಾಡಿಸಲಾಗುತ್ತಿದೆ ಎನ್ನುವ ಮಾಹಿತಿಗಳಿವೆ. ಹಾಗೆ ಟೆಸ್ಟ್ ಗೆ ಒಳಗಾದ ಅಭ್ಯರ್ಥಿಗಳಿಗೆ ಸೋಂಕು ದೃಢಪಟ್ಟರೆ ಕ್ವಾರೆಂಟನ್ಗೆ ಒಳಗಾಗಬೇಕಾಗುತ್ತದೆ. ಅಂತಹ ಅಭ್ಯರ್ಥಿಗಳಿಗಾಗಿ ಮತ್ತೊಮ್ಮೆ ಪರೀಕ್ಷೆ ನಡೆಸಲಾಗುತ್ತಿದೆಯಾ? ಅಥವಾ ಅಭ್ಯರ್ಥಿಗಳು ಗೈರು ಎಂದು ಅನರ್ಹಗೊಳಿಸಲಾಗುತ್ತದೆಯಾ? ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ. ತಮ್ಮ ಮುಂದಿನ ಭವಿಷ್ಯಕ್ಕಾಗಿ ಕಷ್ಟಪಟ್ಟು ಅಭ್ಯಾಸ ಮಾಡಿರುವ ಅಭ್ಯರ್ಥಿಗಳ ಕುರಿತು ಕಾಳಜಿ ವಹಿಸದೇ ಹೇಗೆ ಪರೀಕ್ಷೆ ನಡೆಸುವ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಪ್ರಶ್ನಿಸಿರುವ ಪ್ರಿಯಾಂಕ್ ಖರ್ಗೆ ಅವರು ಯಾವ ಪೂರ್ವಾಪರ ಯೋಚನೆ ಮಾಡದೇ ಪರೀಕ್ಷೆ ನಡೆಸಲು ಉದ್ದೇಶಿಸಿರುವುದರ ಹಿಂದೆ ಸರ್ಕಾರದ ಬೇಜವಾಬ್ದಾರಿ ಎದ್ದು ಕಾಣುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಭ್ಯರ್ಥಿಗಳು ಗೊಂದಲ ಹಾಗೂ ಆತಂಕ ಎದುರಿಸುತ್ತಿದ್ದು, ಈಗ ನಡೆಸಲು ಉದ್ದೇಶಿಸಿರುವ ಪರೀಕ್ಷೆಗಳನ್ನು ಮುಂದೂಡಬೇಕೆಂದು ಪ್ರಿಯಾಂಕ್ ಖರ್ಗೆ ಅವರು ಸಿಎಂ ಯಡಿಯೂರಪ್ಪ ಅವರಿಗೆ ಪತ್ರದ ಮೂಲಕ ಆಗ್ರಹಿಸಿದ್ದಾರೆ.