ಕಲಬುರಗಿ: ಕೋವಿಡ್ ಸೋಂಕಿತರಿಗೆ ತುರ್ತು ಚಿಕಿತ್ಸೆ ನೀಡುವ ದೃಷ್ಠಿಯಿಂದ ಕಲಬುರಗಿಯಲ್ಲಿ ಈ ಕೂಡಲೇ ಪ್ಲಾಸ್ಮಾಥೆರಪಿ ಚಿಕಿತ್ಸಾ ಕೇಂದ್ರ ಸ್ಥಾಪಿಸುವಂತೆ ಶಾಸಕ ಪ್ರಿಯಾಂಕ್ ಖರ್ಗೆ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಈ ಕುರಿತು ಸಿಎಂ ಯಡಿಯೂರಪ್ಪ ಅವರಿಗೆ ಪತ್ರ ಬರೆದಿರುವ ಅವರು ಕಲಬುರಗಿ ಜಿಲ್ಲೆಯಲ್ಲಿ ಕೋವಿಡ್ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚಿದ್ದು, ಇಲ್ಲಿಯವರೆಗೆ ಸುಮಾರು 7341 ಜನ ಸೋಂಕಿತರಿದ್ದಾರೆ. ಅಲ್ಲದೇ 140 ಸೋಂಕಿತರು ಸಾವಿಗೀಡಾಗಿದ್ದಾರೆ. ಜಿಲ್ಲೆಯಲ್ಲಿ ಸೂಕ್ತ ಚಿಕಿತ್ಸೆ ದೊರಕದಿರುವುದರಿಂದ ಹಲವಾರು ಸೋಂಕಿತರು ಸೋಲಾಪುರ ಹಾಗೂ ದೂರದ ಹೈದರಾಬಾದ್ಗೆ ತೆರಳಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.
ಕಲಬುರಗಿ ಜಿಲ್ಲೆಯಲ್ಲಿ ಪ್ರಸ್ತುತ ಜಿಮ್ಸ್ ಆಸ್ಪತ್ರೆಯಲ್ಲಿ ಮಾತ್ರ ಸೋಂಕು ಪತ್ತೆ ಕೇಂದ್ರ ತೆರೆಯಲಾಗಿದ್ದು, ಹೆಚ್ಚುತ್ತಿರುವ ಸೋಂಕು ಪತ್ತೆಗೆ ಇಎಸ್ಐಸಿ ಆಸ್ಪತ್ರೆಯಲ್ಲಿ ಮತ್ತೊಂದು ಕೇಂದ್ರ ತೆರೆಯುವಂತೆ ಸರ್ಕಾರಕ್ಕೆ ಆಗ್ರಹಿಸುತ್ತಿದ್ದರೂ ನಿರ್ಲಕ್ಷ್ಯ ವಹಿಸಲಾಗಿದೆ. ಒಂದೇ ಕೇಂದ್ರದಲ್ಲಿ ಸೋಂಕು ಪತ್ತೆ ವ್ಯವಸ್ಥೆ ಇದ್ದುದರಿಂದ ತೀವ್ರ ಒತ್ತಡವಾಗುತ್ತಿದ್ದು, ನಿತ್ಯ ನೂರಾರು ಪರೀಕ್ಷಾ ವರದಿಗಳು ಹೊರಬರಲು ತಡವಾಗುತ್ತಿವೆ ಎಂದು ಹೇಳಿರುವ ಶಾಸಕರು, ಪ್ಲಾಸ್ಮಾ ಥೆರಪಿ ಚಿಕಿತ್ಸಾ ಕೇಂದ್ರ ಸ್ಥಾಪಿಸುವ ಮೂಲಕ ಸೋಂಕಿತರ ಜೀವ ರಕ್ಷಿಸಬೇಕಿದೆ ಎಂದು ಹೇಳಿದ್ದಾರೆ.
ರಾಜ್ಯದ ಅತಿಹೆಚ್ಚು ಸೋಂಕಿತರ ಸಂಖ್ಯೆ ಹೊಂದಿದ ಜಿಲ್ಲೆಗಳಲ್ಲಿ ಕಲಬುರಗಿ ನಾಲ್ಕನೇಯ ಸ್ಥಾನದಲ್ಲಿದೆ. ಆದರೂ ಸೋಂಕಿತರಿಗೆ ತಕ್ಷಣದ ತುರ್ತು ಹಾಗೂ ಅಗತ್ಯ ಚಿಕಿತ್ಸೆ ನೀಡುವ ಉದ್ದೇಶದಿಂದ ಪ್ಲಾಸ್ಮಾ ಥೆರಪಿ ಚಿಕಿತ್ಸಾ ಕೇಂದ್ರ ಸ್ಥಾಪಿಸದೆ ಕಡೆಗಣಿಸಿದೆ ಎಂದು ಪ್ರಿಯಾಂಕ್ ಖರ್ಗೆ ದೂರಿದ್ದಾರೆ.