ಕಲಬುರಗಿ: ಚುನಾವಣೆಗೆ ಇನ್ನು ಕೇವಲ 8 ದಿನಗಳು ಮಾತ್ರ ಬಾಕಿ ಇದ್ದು, ಇಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತವರು ಜಿಲ್ಲೆ ಕಲಬುರಗಿಯಲ್ಲಿ ನಮೋ ಮೋಡಿ ಮಾಡಲಿದ್ದಾರೆ. ಸಂಜೆ 4:45 ಕ್ಕೆ ಕಲಬುರಗಿ ನಗರಕ್ಕೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಹುಮನಾಬಾದ್ ರಿಂಗ್ ರಸ್ತೆ ಬಳಿಯ ಕೆಎಂಎಫ್‌ನಿಂದ ಸರ್ದಾರ್ ವಲ್ಲಭಬಾಯಿ ಪಟೇಲ್ ವೃತ್ತದವರೆಗೆ ಸುಮಾರು 6 ಕಿ. ಮೀ ರೋಡ್ ಶೋ ನಡೆಸಿ ಬಿಜೆಪಿ ಅಭ್ಯರ್ಥಿಗಳ ಪರ ಮತ ಯಾಚಿಸಲಿದ್ದಾರೆ.
ಕಲಬುರಗಿ DAR ಮೈದಾನಕ್ಕೆ ಹೆಲಿಕಾಪ್ಟರ್ ಮೂಲಕ ಆಗಮಿಸಲಿರುವ ಪ್ರಧಾನಿ ಮೋದಿ, ಭಾರಿ ಭದ್ರತೆಯಲ್ಲಿ KMF ನಿಂದ ರೋಡ್ ಶೋ ಪ್ರಾರಂಭವಾಗಿ, ಗಂಜ್, ಹುಮನಾಬಾದ್ ಬೇಸ್, ಕಿರಾಣಾ ಬಜಾರ್, ಭಾಂಡೆ ಬಜಾರ್, ಸೂಪರ್ ಮಾರ್ಕೆಟ್, ಜಗತ್ ವೃತ್ತ ಮಾರ್ಗವಾಗಿ ಸರ್ದಾರ್ ವಲ್ಲಭಭಾಯಿ ಪಾಟೀಲ್ ವೃತ್ತದಲ್ಲಿ ರೋಡ್ ಶೋ ಅಂತ್ಯಗೊಳ್ಳಲಿದೆ. ಇನ್ನು, ಪ್ರಧಾನಿ ನರೇಂದ್ರ ಮೋದಿ ಆಗಮನದ ಹಿನ್ನೆಲೆ ನಗರ ಸಂಪೂರ್ಣ ಕೇಸರಿಮಯವಾಗಿದೆ.
ಇದನ್ನೂ ಓದಿ:ಕಾಂಗ್ರೆಸ್ ನದ್ದು ಪಿಎಫ್ಐ ಪ್ರಚೋದಿತ ಪ್ರಣಾಳಿಕೆ, ಮೂಲಭೂತವಾದಿ ಮನಸ್ಥಿತಿಯವರು ರಚಿಸಿದ ಮ್ಯಾನಿಫೆಸ್ಟೊ: ಅಸ್ಸೋಂ ಸಿಎಂ
ಜಿಲ್ಲೆಯ 9 ಕ್ಷೇತ್ರಗಳಲ್ಲಿ ಕಮಲ ಅರಳಿಸಲು ಪ್ರಧಾನಿ ಮೋದಿ ಮೆಗಾ ಪ್ಲಾನ್ ಮಾಡಿದ್ದು, 9 ಕ್ಷೇತ್ರಗಳಿಂದ ಸುಮಾರು 3 ಲಕ್ಷಕ್ಕೂ ಅಧಿಕ ಜನ ರೋಡ್ ಶೋ ನಲ್ಲಿ ಪಾಲ್ಗೊಳ್ಳುವ ನಿರೀಕ್ಷೆ ಇದೆ. ರೋಡ್ ಶೋ ಮಾರ್ಗದಲ್ಲಿ ಬ್ಯಾರಿಕೇಡ್ ಅಳವಡಿಕೆ ಮಾಡಲಾಗಿದೆ. ನಮೋ ರೋಡ್ ಶೋ ಹಿನ್ನೆಲೆ ಪೊಲೀಸ್ ಹಾಗೂ ಸೇನಾ ಪಡೆಗಳಿಂದ ಸರ್ಪಗಾವಲು ಹಾಕಲಾಗಿದ್ದು, ಪೊಲೀಸ್ ಹಾಗೂ ಎಸ್ಪಿಜಿ ತಂಡ ನಿರಂತರ ಪರಿಶೀಲನೆಯಲ್ಲಿ ತೊಡಗಿದ್ದಾರೆ.
144 ನಿಷೇಧಾಜ್ಞೆ ಜಾರಿ ಹಾಗೂ ಡ್ರೋನ್ ಕ್ಯಾಮರಾ ಬಳಕೆಗೆ ನಿಷೇಧ - ಜಿಲ್ಲಾಧಿಕಾರಿ: ಯಾವುದೇ ಅಹಿತಕರ ಘಟನೆ ಜರುಗದಂತೆ ಪೊಲೀಸ್ ಇಲಾಖೆ ಕಟ್ಟೆಚ್ಚರ ವಹಿಸಿದ್ದು, ಜನರಿಗೆ, ಪಕ್ಷದ ಮುಖಂಡರಿಗೆ ನಿಲ್ಲುವ ವ್ಯವಸ್ಥೆ ಮಾಡಲಾಗಿದೆ. 144 ನಿಷೇಧಾಜ್ಞೆ ಜಾರಿ ಹಾಗೂ ಡ್ರೋನ್ ಕ್ಯಾಮರಾ ಬಳಕೆಗೆ ನಿಷೇಧ ಹೇರಿ ಜಿಲ್ಲಾಧಿಕಾರಿ ಯಶವಂತ ಗುರುಕರ್ ಆದೇಶ ಹೊರಡಿಸಿದ್ದಾರೆ. ಮೋದಿ ರೋಡ್ ಶೋ ಹಿನ್ನೆಲೆ ವಾಹನಗಳ ಸಂಚಾರ ಮಾರ್ಗ ಬದಲಾವಣೆ ಮಾಡಲಾಗಿದೆ. ಮಧ್ಯಾಹ್ನ 1 ಗಂಟೆಯಿಂದಲೇ ಮೋದಿ ಸಂಚರಿಸುವ ಮಾರ್ಗದಲ್ಲಿ ಸಾರ್ವಜನಿಕ ಸಂಚಾರವನ್ನು ನಿರ್ಬಂಧಿಸಲಾಗಿದೆ. ಇದರಿಂದ ಜನರು ಓಡಾಡಲು ಪರದಾಡುವಂತ ಸ್ಥಿತಿ ನಿರ್ಮಾಣವಾಗಿದೆ.
ಇನ್ನು, ಡಿಸಿ ಯಶವಂತ ಗುರುಕರ್, ಕಮಿಷನರ್ ಚೇತನ್, ಎಸ್ಪಿ ಈಶಾ ಪಂತ್ ಸೇರಿದಂತೆ ಹಿರಿಯ ಅಧಿಕಾರಿಗಳು ಖುದ್ದು ರಸ್ತೆಗೆ ಇಳಿದು ಪರೀಶಿಲನೆ ನಡೆಸುತ್ತಿದ್ದಾರೆ. ಒಟ್ಟಾರೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಗೆ ಟಕ್ಕರ್ ನೀಡಿ ಕಲಬುರಗಿಯಲ್ಲಿ ಹೆಚ್ಚು ಸ್ಥಾನಗಳನ್ನು ಬಿಜೆಪಿ ವಶ ಮಾಡಿಕೊಳ್ಳಲು ಮತಬೇಟೆ ನಡೆಸಲಿರೋ ಪ್ರಧಾನಿ ಮೋದಿ ಆಗಮನಕ್ಕೆ ಭರ್ಜರಿ ಸಿದ್ಧತೆ ನಡೆಯುತ್ತಿದೆ.
ಇದನ್ನೂ ಓದಿ:ಕಾಂಗ್ರೆಸ್-ಜೆಡಿಎಸ್ ಎರಡೂ ಒಂದೇ, ಭ್ರಷ್ಟ, ಪರಿವಾರವಾದಿ ಪಕ್ಷಗಳು: ಚಿತ್ರದುರ್ಗದಲ್ಲಿ ಮೋದಿ