ಕಲಬುರಗಿ: ಕಲಬುರಗಿ ಲೋಕಸಭೆ ಹಾಗೂ ಚಿಂಚೋಳಿ ಉಪ ಚುನಾವಣೆ ಮತ ಎಣಿಕೆಯ ಕಾರ್ಯ ನಾಳೆ ಗುಲ್ಬರ್ಗಾ ವಿಶ್ವವಿದ್ಯಾಲಯ ಆವರಣದಲ್ಲಿ ನಡೆಯಲಿದ್ದು, ಸಿದ್ಧತೆಗಳು ಪೂರ್ಣಗೊಂಡಿವೆ.
ಗುಲ್ಬರ್ಗಾ ವಿಶ್ವವಿದ್ಯಾಲಯ ವಿವಿಧ ವಿಭಾಗಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ. ಲೋಕಸಭೆಯ ಮತ ಎಣಿಕೆ ಎಂಟು ಕೇಂದ್ರಗಳಲ್ಲಿ ನಡೆದರೆ, ಚಿಂಚೋಳಿ ಕ್ಷೇತ್ರದ್ದು ಒಂದು ಮತ ಎಣಿಕೆ ಕೇಂದ್ರದಲ್ಲಿ ನಡೆಯಲಿದೆ.
ಮತ ಎಣಿಕೆ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿದ ಜಿಲ್ಲಾ ಚುನಾವಣಾಧಿಕಾರಿ ಆರ್.ವೆಂಕಟೇಶ್ ಕುಮಾರ್ ಪರಿಶೀಲನೆ ನಡೆಸಿದರು. ಬೆಳಗ್ಗೆ ಎಂಟು ಗಂಟೆಯಿಂದ ಮತ ಎಣಿಕೆ ಆರಂಭಗೊಳ್ಳಲಿದೆ. ಲೋಕಸಭೆ ಮತ್ತು ವಿಧಾನಸಭೆ ಸೇರಿ 9 ಕೇಂದ್ರಗಳಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದ್ದು, ಪ್ರತಿ ಕೇಂದ್ರದಲ್ಲಿ 14 ಟೇಬಲ್ ಅಳವಡಿಸಲಾಗಿದೆ.
ಕೌಂಟಿಂಗ್ ಮುಗಿದ ಮೇಲೆ ವಿವಿ ಪ್ಯಾಟ್ ಕೌಂಟಿಂಗ್ ಮಾಡಲಾಗುತ್ತದೆ. ಪ್ರತಿ ವಿಧಾನಸಭೆ ಕ್ಷೇತ್ರದ ಐದು ಮತಯಂತ್ರಗಳ ವಿವಿ ಪ್ಯಾಟ್ ಮತ ಎಣಿಕೆ ಮಾಡಲಾಗುತ್ತದೆ. ಲಾಟರಿ ಮೂಲಕ ಐದು ವಿವಿ ಪ್ಯಾಟ್ ಆಯ್ಕೆ ಮಾಡಲಾಗುತ್ತದೆ. ಮತ ಎಣಿಕೆಗಾಗಿ 2 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ.
ಭದ್ರತೆಗಾಗಿ 130 ಕ್ಕೂ ಹೆಚ್ಚು ಕೇಂದ್ರೀಯ ಪಡೆ, 2 ಸಾವಿರ ಪೊಲೀಸ್ ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಮತ ಎಣಿಕೆ ಕೇಂದ್ರದಿಂದ 100 ಮೀಟರ್ ಅಂತರದಲ್ಲಿ 144 ಸೆಕ್ಷನ್ ಅಡಿ ನಿಷೇದಾಜ್ಞೆ ಜಾರಿ ಮಾಡಲಾಗಿದೆ. ಕಲಬುರಗಿ ನಗರದಾದ್ಯಂತ ವಿಜಯೋತ್ಸವ ನಿಷೇಧ ಮಾಡಲಾಗಿದೆ ಎಂದು ಆರ್.ವೆಂಕಟೇಶ್ ಕುಮಾರ್ ಮಾಹಿತಿ ನೀಡಿದ್ದಾರೆ.