ಕಲಬುರಗಿ: ಕೊರೊನಾ ಸೋಂಕು ತಡೆಗಾಗಿ ಸರ್ಕಾರ ಜಾರಿಗೆ ತಂದಿರುವ ನಿಯಮಗಳನ್ನ ಕೆಲ ಸಿಮೆಂಟ್ ಕಾರ್ಖಾನೆಗಳು ಪಾಲಿಸುತ್ತಿಲ್ಲ ಎಂಬ ಆರೋಪ ಕೇಳಿ ಬಂದ ಹಿನ್ನೆಲೆ, ಅಧಿಕಾರಿಗಳು ಕಾರ್ಖಾನೆಗಳ ಆಡಳಿತ ಮಂಡಳಿಗೆ ತರಾಟೆ ತೆಗೆದುಕೊಂಡಿದ್ದಾರೆ.
ಸೇಡಂನ ವಾಸವದತ್ತ ಸಿಮೆಂಟ್ ಕಾರ್ಖಾನೆಗೆ ಭೇಟಿ ನೀಡಿದ ಎಸಿ ರಮೇಶ್ ಕೋಲಾರ ಹಾಗೂ ಸಿಪಿಐ ರಾಜಶೇಖರ್ ಹಳಗೋದಿ ನೇತೃತ್ವದ ತಂಡ ಅಧಿಕಾರಿಗಳಿಗೆ ಚಳಿ ಬಿಡಿಸಿದ್ದಾರೆ. ಇಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಸರಿಯಾದ ತಪಾಸಣಾ ವ್ಯವಸ್ಥೆಯಿಲ್ಲ. ಸಾವಿರಾರು ಕಾರ್ಮಿಕರು ಕೆಲಸ ಮಾಡುತ್ತಿದ್ದರೂ, ಮುಂಜಾಗ್ರತಾ ಕ್ರಮ ಕೈಗೊಂಡಿಲ್ಲ. ಅಲ್ಲದೆ, ಕೆಲಸಕ್ಕೆಂದು ಹೊರ ರಾಜ್ಯದ ಕಾರ್ಮಿಕರನ್ನು ಕರೆಸಿಕೊಳ್ಳುತ್ತಿರುವ ಪ್ರಯುಕ್ತ ಸೋಂಕು ಉಲ್ಬಣಗೊಳ್ಳುತ್ತೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದರು.
ಇದೇ ವೇಳೆ, ಕೆಲ ಕಾರ್ಮಿಕರು ಕಾರ್ಖಾನೆ ಆಡಳಿತ ಮಂಡಳಿ ವಿರುದ್ದ ಅಸಮಾಧಾನ ಹೊರ ಹಾಕಿದರು. ಅಧಿಕಾರಿಗಳ ಬಳಿ ಮಾಸ್ಕ್ಗಳನ್ನು ಕೇಳಿದರೆ ಮುಗಿದು ಹೋಗಿವೆ ಅಂತಾರೆ ಎಂದು ಆರೋಪಿಸಿದರು. ಇದಕ್ಕೆ ಸಿಪಿಐ ರಾಜಶೇಖರ ಹಳಗೋದಿ ಕೆಂಡಾ ಮಂಡಲರಾಗಿ, ಸರ್ಕಾರ ಹೊರಡಿಸಿರುವ ಸೂಚನೆಗಳನ್ನ ಕಟ್ಟುನಿಟ್ಟಾಗಿ ಪಾಲಿಸುವಂತೆ ಎಚ್ಚರಿಕೆ ನೀಡಿದರು. 60 ವರ್ಷ ಮೇಲ್ಪಟ್ಟವರನ್ನ ಕಾರ್ಖಾನೆ ಒಳಗೆ ಸೇರಿಸಿಕೊಳ್ಳಬೇಡಿ, ಬಯೋ ಮೆಟ್ರಿಕ್ ಬದಲಿಗೆ ಪರ್ಯಾಯ ವ್ಯವಸ್ಥೆ ಕೈಗೊಳ್ಳಿ ಎಂದರು. ಈ ವೇಳೆ ವಾಸವದತ್ತ ಕಾರ್ಖಾನೆಯ ಮಾನವ ಸಂಪನ್ಮೂಲ ವಿಭಾಗದ ಡಿಜಿಎಂ ಆನಂದ ಕುಲಕರ್ಣಿ ಉಪಸ್ಥಿತರಿದ್ದರು.