ಕಲಬುರಗಿ: ಮಾದಿಗ ಮತ್ತು ಉಪ ಜಾತಿಗಳಿಗೆ ಒಳ ಮೀಸಲಾತಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಜಾರಿಗೆ ತನ್ನಿ, ಇಲ್ಲವೇ ತಿರಸ್ಕರಿಸಿ. ಮುಂದೇನು ಮಾಡಬೇಕೆಂದು ನಮಗೆ ಗೊತ್ತು ಎಂದು ರಾಜ್ಯ ಸರ್ಕಾರಕ್ಕೆ ವಿವಿಧ ಸಮುದಾಯಗಳ ಮಠಾಧೀಶರು ಎಚ್ಚರಿಕೆ ನೀಡಿದ್ದಾರೆ.
ಸದಾಶಿವ ಆಯೋಗದ ವರದಿ ಸಲ್ಲಿಕೆಯಾಗಿ ಹತ್ತಾರು ವರ್ಷಗಳು ಕಳೆದಿವೆ. ಮೀಸಲಾತಿ ಜಾರಿಗೆ ಒತ್ತಾಯಿಸಿ ಕಳೆದ 30 ವರ್ಷಗಳಿಂದಲೂ ಸತತ ಹೋರಾಟ ನಡೆಸಲಾಗುತ್ತಿದೆ. ಆದರೂ ರಾಜ್ಯದಲ್ಲಿ ಯಾವುದೇ ಪಕ್ಷದ ಸರ್ಕಾರ ಅಸ್ತಿತ್ವಕ್ಕೆ ಬಂದರೂ ವರದಿ ಜಾರಿಗೆ ಮುಂದಾಗಿಲ್ಲ. ಕಳದೆ 30 ವರ್ಷಗಳಿಂದ ಸುಳ್ಳು ಭರವಸೆ ನೀಡಿ ಕಾಲಹರಣ ಮಾಡಲಾಗುತ್ತಿದೆ.
ಇದೀಗ ಬಿಜೆಪಿ ಸರ್ಕಾರವಿದ್ದು, ವರದಿಯನ್ನು ಸದನದಲ್ಲಿಟ್ಟು ಕೇಂದ್ರಕ್ಕೆ ಶಿಫಾರಸು ಮಾಡಲಿ. ಕೇವಲ ಪೋಸ್ಟ್ ಮ್ಯಾನ್ ಕೆಲಸಕ್ಕೂ ಇಷ್ಟು ವಿಳಂಬ ಮಾಡ್ತಿರೋದು ಸರಿಯಲ್ಲ. ನಮ್ಮ ಪಾಲಿನ ಸವಲತ್ತುಗಳನ್ನು ಬೇರೆಯವರು ಕಸಿದುಕೊಂಡಿದ್ದಾರೆ. ಈ ಅನ್ಯಾಯವನ್ನು ಸಹಿಸಲ್ಲ. ವರದಿ ಮಂಡಿಸಲು ತಾಕತ್ತಿಲ್ಲದಿದ್ದರೆ ಸಮಿತಿಯನ್ನು ಏಕೆ ರಚಿಸಬೇಕಿತ್ತು. ಸದಾಶಿವ ವರದಿ ಅನುಷ್ಠಾನ ಮಾಡಬೇಕೆಂದು ಸ್ವಾಮೀಜಿಗಳು ಆಗ್ರಹಿಸಿದ್ದಾರೆ.