ಕಲಬುರಗಿ: ಅಕ್ರಮವಾಗಿ ನಗರದಲ್ಲಿ ಓಡಾಡುತ್ತಿದ್ದ ಆಟೋಗಳ ವಿರುದ್ಧ ಟ್ರಾಫಿಕ್ ಪೊಲೀಸರು ಮತ್ತು ಆರ್‌ಟಿಒ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆಗೆ ಇಳಿದಿದ್ದು, 35 ಆಟೋಗಳನ್ನು ಜಪ್ತಿ ಮಾಡಿದ್ದಾರೆ.
ಹುಮನಾಬಾದ ರಿಂಗ್ ರಸ್ತೆ ಬಳಿ ಟ್ರಾಫಿಕ್ ಎಸಿಪಿ ಸುಧಾ ಆದಿ ನೇತೃತ್ವದಲ್ಲಿ ನಗರದ ಎರಡು ಇಲಾಖೆ ಅಧಿಕಾರಿಗಳು ಜಂಟಿಯಾಗಿ ಆಟೋಗಳ ದಾಖಲಾತಿ ತಪಾಸಣೆ ನಡೆಸಿದ್ದಾರೆ. ದಾಖಲಾತಿ ಮತ್ತು ನಗರ ಪ್ರದೇಶ ಪರವಾನಗಿ ಇಲ್ಲದೆ ಓಡಾಡುತ್ತಿದ್ದ 35 ಆಟೋಗಳನ್ನು ಸೀಜ್ ಮಾಡಿದ್ದಾರೆ. ನಗರ ಪ್ರದೇಶ ಪರವಾನಗಿ ಇದ್ದರೂ ಪೋಲ್ಯುಶನ್, ಇನ್ಶುರೆನ್ಸ್, ಫಿಟ್ನೆಸ್ನಂತಹ ಅಗತ್ಯ ದಾಖಲಾತಿಗಳು ಇಲ್ಲದೇ ಓಡಿಸುತ್ತಿದ್ದ 100ಕ್ಕೂ ಅಧಿಕ ಆಟೋಗಳನ್ನು ಪತ್ತೆ ಮಾಡಿ ದಂಡ ವಿಧಿಸಿದ್ದಾರೆ. ಇನ್ನು ಜಪ್ತಿ ಮಾಡಲಾದ ಆಟೋಗಳನ್ನು ಆರ್‌ಟಿಒ ಕಚೇರಿ ಆವರಣಕ್ಕೆ ತಂದು ನಿಲ್ಲಿಸಲಾಗಿದೆ.
ಟ್ರಾಫಿಕ್ ಪಿಎಸ್ಐ ಹಾಗೂ ಸಿಬ್ಬಂದಿಯಿಂದ ಆಟೋ ಚಾಲಕರಿಗೆ ಅನಗತ್ಯ ಕಿರಿಕಿರಿಯಾಗುತ್ತಿದೆ. ಅಲ್ಲದೇ ನಗರ ಪ್ರದೇಶ ಪರವಾನಗಿ ಇಲ್ಲದೇ ಓಡಾಡುತ್ತಿರುವ ಆಟೋಗಳಿಗೆ ಕಡಿವಾಣ ಹಾಕಬೇಕು ಎಂದು ನಿನ್ನೆಯಷ್ಟೇ ಟ್ರಾಫಿಕ್ ಪೊಲೀಸ್ ಕಚೇರಿ ಮುಂದೆ ಆಟೋ ಚಾಲಕರು ಪ್ರತಿಭಟನೆ ನಡೆಸಿದ್ದರು.
ಇದನ್ನೂ ಓದಿ: ಕಲಬುರಗಿ ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯ: ಹತ್ತಾರು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ