ಕಲಬುರಗಿ: ಪಟಾಕಿ ಹಾಗೂ ಸಿಡಿ ಮದ್ದು ಮಾರಾಟ ಮಳಿಗೆಗಳ ಮೇಲೆ ದಿಢೀರ್ ದಾಳಿ ನಡೆಸಿದ ಪೊಲೀಸರು ಹಿಂದೂ ಧರ್ಮದ ಆರಾಧ್ಯ ದೈವ ಲಕ್ಷ್ಮಿ ದೇವರ ಚಿತ್ರವುಳ್ಳ ಪಟಾಕಿಗಳನ್ನು ವಶಪಡಿಸಿಕೊಂಡರು.
ನಗರದಲ್ಲಿ ಲಕ್ಷ್ಮಿ ದೇವಿಯ ಚಿತ್ರವುಳ್ಳ ಸಿಡಿ ಮದ್ದುಗಳನ್ನು ಮಾರಾಟ ಮಾಡಲಾಗುತ್ತಿದೆ. ಪಟಾಕಿ ಸಿಡಿಸಿದ ಮೇಲೆ ಲಕ್ಷ್ಮಿ ಚಿತ್ರವುಳ್ಳ ಪೇಪರ್ ರಸ್ತೆ ಮೇಲೆ ಬೀಳುವುದರಿಂದ ಅದನ್ನು ಎಲ್ಲರೂ ತುಳಿಯುತ್ತಾರೆ. ಇದರಿಂದಾಗಿ ದೇವರಿಗೆ ಹಾಗೂ ಹಿಂದೂ ಧರ್ಮಕ್ಕೆ ಅಪಮಾನ ಮಾಡಿದಂತಾಗುತ್ತಿದೆ. ಲಕ್ಷ್ಮಿ ಚಿತ್ರವುಳ್ಳ ಆಟಂ ಬಾಂಬ್ ಪಟಾಕಿ ಮಾರಾಟ ಮಾಡಲಾಗುತ್ತಿದ್ದು, ತಕ್ಷಣ ಕ್ರಮ ಕೈಗೊಳ್ಳುವಂತೆ ಹಿಂದೂಪರ ಸಂಘಟನೆಗಳ ಮುಖಂಡರು ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ: ಗಡಿಯಲ್ಲಿ ದೀಪ ಬೆಳಗಿಸಿ, ಪಟಾಕಿ ಸಿಡಿಸಿ ದೀಪಾವಳಿ ಸಂಭ್ರಮಿಸಿದ ಭಾರತೀಯ ಯೋಧರು
ದೂರಿನ ಮೇರೆಗೆ ಬ್ರಹ್ಮಪುರ ಪೊಲೀಸ್ ಠಾಣಾ ವ್ಯಾಪ್ತಿಯ ಶರಣಬಸವೇಶ್ವರ ಮೈದಾನದಲ್ಲಿ ತಾತ್ಕಾಲಿಕವಾಗಿ ನಿರ್ಮಾಣ ಮಾಡಲಾದ ಸಿಡಿ ಮದ್ದು ಮಾರಾಟ ಮಳಿಗೆಗಳ ಮೇಲೆ ಪೊಲೀಸರು ದಾಳಿ ನಡೆಸಿ, ಲಕ್ಷ್ಮಿ ಚಿತ್ರಗಳುಳ್ಳ ಮದ್ದುಗಳನ್ನು ವಶಪಡಿಸಿಕೊಂಡರು. ಜೊತೆಗೆ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವಂತಹ ಚಿತ್ರಗಳುಳ್ಳ ಪಟಾಕಿ ಮಾರಾಟ ಮಾಡದಂತೆ ವ್ಯಾಪಾರಸ್ಥರಿಗೆ ಖಡಕ್ ಸೂಚನೆ ನೀಡಿದರು.