ಕಲಬುರಗಿ: ಆಳಂದ ತಾಲೂಕಿನಲ್ಲಿ ಪೊಲೀಸರಿಂದಲೇ ಗೂಂಡಾಗಿರಿ ನಡೆದಿದೆ. ಪೊಲೀಸರು ಮನೆಗೆ ನುಗ್ಗಿ ಮಹಿಳೆಯರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಾಜಿ ಶಾಸಕ ಬಿ.ಆರ್.ಪಾಟೀಲ್ ಆರೋಪಿಸಿದ್ದಾರೆ.
ಗ್ರಾಮ ಪಂಚಾಯಿತಿ ಚುನಾವಣಾ ಸಿದ್ಧತೆಯಲ್ಲಿದ್ದವರ ಮೇಲೆ ಕಡಗಂಚಿ ಗ್ರಾಮದಲ್ಲಿ ವಿನಾ ಕಾರಣ ಪೊಲೀಸರಿಂದ ಹಲ್ಲೆ ನಡೆದಿದೆ. ಕಾಂಗ್ರೆಸ್ ಬೆಂಬಲಿತ ಮಚ್ಚೇಂದ್ರ ನರೋಣಿ ಎನ್ನುವವರ ಕುಟುಂಬದ ಮೇಲೆ ಹಲ್ಲೆ ಮಾಡಲಾಗಿದೆ. ಸ್ವತಃ ಡಿವೈಎಸ್‌ಪಿ ಮಲ್ಲಿಕಾರ್ಜುನ ಸಾಲಿ ನೇತೃತ್ವದಲ್ಲಿ ತೆರಳಿದ ಪೊಲೀಸರಿಂದ ಹಲ್ಲೆ ನಡೆದಿದೆ ಎಂದು ಮಾಜಿ ಶಾಸಕರು ಆರೋಪಿಸಿದ್ದಾರೆ.
ಓದಿ:ಲಂಚದ ಆರೋಪ ಸುಳ್ಳು, ನಾನು ಆಣೆ-ಪ್ರಮಾಣ ಮಾಡಲು ಸಿದ್ಧನಿದ್ದೇನೆ: ಅಬಕಾರಿ ಸಚಿವ ನಾಗೇಶ್
ಕಳೆದ ರಾತ್ರಿ ಮನೆಗೆ ನುಗ್ಗಿ ಊಟ ಮಾಡುತ್ತಿದ್ದವರನ್ನು ಹಿಗ್ಗಾಮುಗ್ಗ ಥಳಿಸಿ ಬಂದಿದ್ದಾರೆ. ಮದ್ಯಪಾನ ಮಾಡಿ ಡಿವೈಎಸ್‌ಪಿ ಮತ್ತು ಇತರೆ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ. ಶಾಸಕ ಸುಭಾಷ್ ಗುತ್ತೇದಾರರಿಂದ ಸುಪಾರಿ ಪಡೆದು ಪೊಲೀಸರು ಈ ಕೃತ್ಯ ಎಸಗಿದ್ದಾರೆ. ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರನ್ನು ಬಗ್ಗುಬಡಿಯಲು ಈ ರೀತಿ ಬೆದರಿಕೆ ತಂತ್ರಗಳನ್ನು ಅನುಸರಿಸಲಾಗಿದೆ. ತಕ್ಷಣ ಡಿವೈಎಸ್‌ಪಿ ಮತ್ತು ಇತರೆ ಸಿಬ್ಬಂದಿಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಬೇಕು. ಮದ್ಯ ಸೇವಿಸಿರೋದು ಸಾಬೀತಾದಲ್ಲಿ ಅಮಾನತು ಮಾಡಬೇಕು. ಪೊಲೀಸರ ಗೂಂಡಾಗಿರಿಗೆ ಕಡಿವಾಣ ಹಾಕಬೇಕೆಂದು ಪಾಟೀಲ್ ಆಗ್ರಹಿಸಿದ್ದಾರೆ.